ಹೊನ್ನಾವರದ ಸಾಲ್ಕೋಡ್ ಭಾಗದಲ್ಲಿ ಚಿರತೆ ಓಡಾಟ ಜಾಸ್ತಿಯಾಗಿದ್ದು, ಅರೆ ಅಂಗಡಿ ಸಮೀಪ ವ್ಯಕ್ತಿಯೊಬ್ಬರು ಉರುಳು ಹಾಕಿ ಚಿರತೆಯನ್ನು ಬಂಧಿಸಿದ್ದಾರೆ. ಚಿರತೆ ಉರುಳಿಗೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವಿಷಯ ಕೇಳಿ ಅರಣ್ಯ ಇಲಾಖೆಯವರು ಅಲ್ಲಿ ದೌಡಾಯಿಸಿದ್ದಾರೆ.
ಸಾಲ್ನೋಡ್ ಬಳಿಯ ಅರೇ ಅಂಗಡಿ ಸಮೀಪದ ಗೇರು ಪ್ಲಾಂಟೇಶನ್ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಚಿರತೆಯೊಂದು ಕಾಣಿಸಿದೆ. ಕುತ್ತಿಗೆಗೆ ಕಟ್ಟಿದ ಹಗ್ಗದಿಂದ ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದ ಚಿರತೆ ನೋಡಿದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅರಣ್ಯ ಸಿಬ್ಬಂದಿ ಅಲ್ಲಿಗೆ ಆಗಮಿಸಿದ್ದು, ಬಂಧನಕ್ಕೆ ಒಳಗಾದ ಚಿರತೆಯನ್ನು ಬಿಡುಗಡೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಚಿರತೆ ಘರ್ಜನೆ ಶಬ್ದ ಕೇಳಿ ಸಮೀಪ ಹೋದ ಜನ ಹೌಹಾರಿದ್ದಾರೆ. ಅದಾದ ನಂತರ ಅಧಿಕಾರಿಗಳು ಆಗಮಿಸಿದ್ದು, ಗೇರು ಪ್ಲಾಂಟೇಶನ್ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಅಳವಡಿಸಿದ ಉರುಳಿಗೆ ಚಿರತೆ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಂಧನಕ್ಕೆ ಒಳಗಾದ ಚಿರತೆಯ ಚೀರಾಟ ಜೋರಾಗಿದ್ದು, ಅನೇಕರು ಅದನ್ನು ನೋಡಲು ಆಗಮಿಸಿದ್ದಾರೆ. ಹೀಗಾಗಿ ಚಿರತೆ ರಕ್ಷಣೆಯ ಕಾರ್ಯಾಚರಣೆಗೂ ಅಡ್ಡಿಯಾಗಿದೆ.
ಸದ್ಯ ಚಿರತೆ ಇನ್ನಷ್ಟು ವ್ಯಾಘ್ರ ಸ್ವರೂಪಪಡೆದಿದ್ದು, ಅರವಳಿಕೆ ನೀಡಿ ಅದನ್ನು ರಕ್ಷಿಸುವ ಬಗ್ಗೆ ಚಿಂತನೆ ನಡೆದಿದೆ. ಸಾರ್ವಜನಿಕರು ಸಮೀಪ ಬಾರದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ಸಹ ರಕ್ಷಣಾ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.