ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ವೈದ್ಯರ ಸೋಗಿನಲ್ಲಿ ಕೆಲವರು ನಕಲಿ ಕ್ಲಿನಿಕ್ ಸಹ ನಡೆಸುತ್ತಿದ್ದಾರೆ.
ನಕಲಿ ಕ್ಲಿನಿಕ್ ಹಾಗೂ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದಾಗಿಯೂ, ನಕಲಿ ವೈದ್ಯರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಮುಂಡಗೋಡು, ಅಂಕೋಲಾ ಹಾಗೂ ಭಟ್ಕಳದಲ್ಲಿನ ನಕಲಿ ವೈದ್ಯರನ್ನು ಆರೋಗ್ಯಾಧಿಕಾರಿಗಳು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿದ್ದಾರೆ. ಅಧಿಕಾರಿಗಳು ದಾಳಿ ನಡೆಸಿ ಕ್ಲಿನಿಕ್ ಬಂದ್ ಮಾಡಿದ ಕೆಲವೇ ದಿನಗಳಲ್ಲಿ ಮತ್ತೆ ಅದೇ ಸ್ಥಳದಲ್ಲಿ ಕ್ಲಿನಿಕ್ ಶುರುವಾದ ಉದಾಹರಣೆಗಳು ಸಾಕಷ್ಟಿವೆ. ಇದೆಲ್ಲದರ ನಡುವೆ ಆಯುರ್ವೇದ ಓದಿ ಇಂಗ್ಲಿಷ್ ಔಷಧಿ ನೀಡುವುದು, ಅಧಿಕಾರ ಇಲ್ಲದಿದ್ದರೂ ಚುಚ್ಚುಮದ್ದು ಕೊಡುವುದು ಹಾಗೂ ತಮ್ಮದೇ ಆದ ಔಷಧಿ ಅಂಗಡಿಗಳನ್ನು ತೆರೆದು ಅನಗತ್ಯ ಮಾತ್ರೆಗಳನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅನೇಕ ಕ್ಲಿನಿಕ್’ಗಳು ನಿಯಮಗಳ ಪ್ರಕಾರ ನಡೆಯುತ್ತಿಲ್ಲ. ಸರಿಯಾದ ದಾಖಲೆಗಳಿಲ್ಲದೇ ಆಸ್ಪತ್ರೆ ನಡೆಸುವವರು ಹಾಗೂ ಪ್ರಮಾಣ ಪತ್ರಗಳಿಲ್ಲದೇ ಚಿಕಿತ್ಸೆ ನೀಡುವ ವೈದ್ಯರು ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಜಿಲ್ಲೆಯ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಜೊತೆಗೆ ರೋಗಿಗಳ ಆರೈಕೆ ಮಾಡುವ ಸಿಬ್ಬಂದಿ ಸಹ ಕಡಿಮೆ ಇದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರ ಭೇಟಿ ಅಸಾಧ್ಯವಾಗಿದ್ದು, ಜನ ಖಾಸಗಿ ಕ್ಲಿನಿಕ್ ಮೊರೆ ಹೋಗುತ್ತಿದ್ದಾರೆ. ಆದರೆ, ಹಲವು ಖಾಸಗಿ ಕ್ಲಿನಿಕ್ ಅನಧಿಕೃತ ಪಟ್ಟಿಯಲ್ಲಿದೆ. ಅನುಭವ ಇಲ್ಲದೇ ಚಿಕಿತ್ಸೆ ನೀಡುವವರಿಂದಾಗಿ ರೋಗಿಗಳು ಸಮಸ್ಯೆಗೆ ಸಿಲುಕುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆಯೇ ಡೋಂಗಿ ಡಾಕ್ಟರ್’ಗಳ ಬಂಡವಾಳ. ಯಾವುದೇ ವೈದ್ಯಕೀಯ ಕೋರ್ಸ ಮಾಡದೇ ಕ್ಲಿನಿಕ್ ತೆರೆಯುವ ಅಂಥವರು ದಾಳಿ ನಡೆದಾಗ ಊರು ತೊರೆಯುತ್ತಾರೆ. ಆದರೆ, ಮತ್ತೊಂದು ಊರಿನಲ್ಲಿ ಹೊಸ ಹೆಸರಿನ ಜೊತೆ ಹೊಸ ಕ್ಲಿನಿಕ್ ತೆರೆಯುತ್ತಿದ್ದಾರೆ. ಗ್ರಾಮೀಣ ಭಾಗದ ಅಮಾಯಕರ ಜೊತೆ ಪಟ್ಟಣದ ಜನ ಸಹ ನಕಲಿ ವೈದ್ಯರ ಪ್ರಯೋಗ ಶಾಲೆಗೆ ಬಲಿಯಾಗುತ್ತಿದ್ದಾರೆ.