ಲೈಸನ್ಸ ಇಲ್ಲದೇ ಬೈಕ್ ಓಡಿಸಿದ ಬಾಲಕನನ್ನು ಭಟ್ಕಳ ಪೊಲೀಸರು ಹಿಡಿದಿದ್ದು, ಆ ಬಾಲಕನ ಅಪ್ಪನಿಗೆ ನ್ಯಾಯಾಲಯ 25 ಸಾವಿರ ರೂ ದಂಡ ವಿಧಿಸಿದೆ. ಮಗನಿಗೆ ಮತ್ತೆ ಬೈಕ್ ಕೊಡದಂತೆಯೂ ನ್ಯಾಯಾಲಯ ಸೂಚಿಸಿದೆ.
ಮುರುಡೇಶ್ವರ ಬಳಿ ಬಸ್ತಿ ಕಾಯ್ಕಿಣಿ ನಿವಾಸಿ ರಾಜೇಶ್ ನಾಗಪ್ಪ ನಾಯ್ಕ ಅವರು ಅಪ್ರಾಪ್ತನಿಗೆ ಬೈಕ್ ನೀಡಿದ ಆರೋಪದ ಅಡಿ ಸಿಕ್ಕಿ ಬಿದ್ದಿದ್ದರು. ಮುರುಡೇಶ್ವರ ಪಿಎಸ್‌ಐ ಹನುಮಂತ ಬಿರಾದಾರ ಅವರು ಮೋಟಾರ್ ವಾಹನ ಕಾಯ್ದೆಯ ಅನ್ವಯ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯ ಪ್ರಕರಣ ವಿಚಾರಣೆ ನಡೆಸಿದ್ದು, ಅಪ್ರಾಪ್ತರ ಬೈಕ್ ಚಾಲನೆಯನ್ನು ಗಂಭೀರವಾಗಿ ಪರಿಗಣಿಸಿತು.
ಅಪ್ರಾಪ್ತನಿಗೆ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟ ಹಿನ್ನಲೆ ರಾಜೇಶ ನಾಗಪ್ಪ ನಾಯ್ಕ ಅವರಿಗೆ 25 ಸಾವಿರ ದಂಡ ವಿಧಿಸಿ ಆದೇಶಿಸಿತು. ನ್ಯಾಯಾಲಯದ ಆದೇಶದ ಹಿನ್ನಲೆ ಅವರು ದಂಡ ಪಾವತಿಸಿದ್ದು, ಈ ರೀತಿ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವಂತೆಯೂ ನ್ಯಾಯಾಲಯ ಸೂಚಿಸಿತು. `ಅಪ್ರಾಪ್ತರಿಗೆ ವಾಹನ ನೀಡುವುದು ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳ ಮೇಲೆ ಮುಂದುವರೆದoತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪೊಲೀಸರು ಹೇಳಿದ್ದಾರೆ.