ಭಿಕ್ಷುಕನ ವೇಷ ಧರಿಸಿ ಮನೆ ಮನೆ ಸಂಚಾರ ನಡೆಸುವ ಫಾರುಖ್ ಉಲ್ಲಾ ಅವರು ರಾತ್ರಿ ವೇಳೆ ಸಂಚು ರೂಪಿಸಿ ಕಳ್ಳತನ ಮಾಡುತ್ತಿದ್ದು, ಸಿದ್ದಾಪುರ ಪೊಲೀಸರು ಆ ಕಳ್ಳನ ಹೆಡೆಮುರಿ ಕಟ್ಟಿದ್ದಾರೆ.
ಶಿವಮೊಗ್ಗ ಶಿರಾಳಿಕೊಪ್ಪದ ಫಾರುಖ್ ಉಲ್ಲಾ ಜೋಗಿ ಬಾಷಾಸಾಬ (24) ಎಳೆಯ ವಯಸ್ಸಿನಲ್ಲಿಯೇ ಕಳ್ಳತನದ ದಾರಿ ಹಿಡಿದಿದ್ದರು. ರಾಜ್ಯದ ನಾನಾ ಕಡೆ ಸಂಚರಿಸಿ ಅವರು ಕಳ್ಳತನ ಮಾಡಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಫಾರುಖ್ ಉಲ್ಲಾ ಅವರು ಭಿಕ್ಷÄಕನ ವೇಷ ಧರಿಸಿ ತಿರುಗಾಡುತ್ತಿದ್ದರು. ಸಿದ್ದಾಪುರದಲ್ಲಿಯೂ ಒಂದು ಕಳ್ಳತನ ಪ್ರಕರಣದಲ್ಲಿ ಫಾರುಖ್ ಉಲ್ಲಾ ಅವರು ಸಿಕ್ಕಿಬಿದ್ದಿದ್ದು, ನಂತರ ಅವರು ಪರಾರಿಯಾಗಿದ್ದರು. ನ್ಯಾಯಾಲಯಕ್ಕೆ ಸಹ ಹಾಜರಾಗದೇ ತಲೆಮರೆಸಿಕೊಂಡಿದ್ದರು.
ಕಳೆದ ನಾಲ್ಕು ವರ್ಷಗಳಿಂದ ಪೊಲೀಸರು ಫಾರುಖ್ ಉಲ್ಲಾ ಅವರ ಹುಡುಕಾಟ ನಡೆಸಿದ್ದು, ಭಿಕ್ಷÄಕನ ವೇಷ ಧರಿಸಿ ಸಂಚರಿಸುತ್ತಿದ್ದ ಕಾರಣ ಪತ್ತೆಯಾಗಿರಲಿಲ್ಲ. ಫಾರುಖ್ ಉಲ್ಲಾ ಅವರ ಪತ್ತೆಗೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತು. ಸಿದ್ದಾಪುರ ಪೊಲೀಸರು ಆರೋಪಿತನ ಪತ್ತೆಗಾಗಿ ಶಿವಮೊಗ್ಗ, ಹಾವೇರಿ, ಮಂಗಳೂರು ಸೇರಿ ವಿವಿಧ ಕಡೆ ಹುಡುಕಾಟ ನಡೆಸಿದರು. ಉಡುಪಿಯ ತ್ರಾಸಿ ಬಳಿ ವೇಷ ಬದಲಿಸಿಕೊಂಡಿದ್ದ ಫಾರುಖ್ ಉಲ್ಲಾ ಈ ದಿನ ಸಿಕ್ಕಿ ಬಿದ್ದರು.