ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕುಳ್ಳರ ಸಂಖ್ಯೆ ಹೆಚ್ಚಾಗತ್ತಿದೆ. ಐದು ವರ್ಷದೊಳಗಿನ ಐದು ಸಾವಿರಕ್ಕೂ ಅಧಿಕ ಕುಳ್ಳರು ಈ ಜಿಲ್ಲೆಯಲ್ಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ 73 ಸಾವಿರಕ್ಕೂ ಹೆಚ್ಚಿನ ಮಕ್ಕಳು ಅಂಗನವಾಡಿಗೆ ಹೋಗುತ್ತಿದ್ದಾರೆ. ಆಗಾಗ ಅವರ ತೂಕ ಹಾಗೂ ಎತ್ತರ ಲೆಕ್ಕಾಚಾರ ನಡೆಯುತ್ತಿದ್ದು, ಈ ವೇಳೆ 5 ಸಾವಿರಕ್ಕೂ ಅಧಿಕ ಮಕ್ಕಳು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದಕ್ಕಿಂತಲೂ ಕಡಿಮೆ ಪ್ರಮಾಣದ ಎತ್ತರವಿರುವುದು ಗೊತ್ತಾಗಿದೆ. ಅಂಥ ಮಕ್ಕಳು ತೂಕದಲ್ಲಿಯೂ ಸಹ ಕಡಿಮೆಯಿದ್ದು, ಅವರಿಗೆ ಪೌಷ್ಠಿಕ ಆಹಾರ ನೀಡುವ ಕಾಯಕ ಮುಂದುವರೆದಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಐದು ವರ್ಷದ ಗಂಡು ಮಕ್ಕಳು 110ಸೆಂಟಿ ಮೀಟರ್ ಎತ್ತರವಿರಬೇಕು. 18.3ಕೆಜಿ ತೂಕವಿರಬೇಕು. ಐದು ವರ್ಷದ ಹೆಣ್ಣು ಮಕ್ಕಳು 109ಸೆಂಟಿ ಮೀಟರ್ ಉದ್ದ ಹಾಗೂ 18.2 ಕೆಜಿ ತೂಕವಿರಬೇಕು. ತಂದೆ-ತಾಯಿಯ ಪೃಕೃತಿ ಆಧಾರದಲ್ಲಿ ಈ ಉದ್ದ ಹಾಗೂ ತೂಕ ಅಲ್ಪ ಸ್ವಲ್ಪ ಹೆಚ್ಚುಕಡಿಮೆ ಆದರೂ ಸಮಸ್ಯೆ ಏನಿಲ್ಲ. ಇದರಿಂದ ಗಂಭೀರ ಪ್ರಮಾಣದ ಆರೋಗ್ಯ ಸಮಸ್ಯೆಗಳೇನೂ ಕಾಡುವುದಿಲ್ಲ. ಆದರೆ, ಅಂಗನವಾಡಿ ಲೆಕ್ಕಾಚಾರದ ಪ್ರಕಾರ ವಯಸ್ಸಿಗೆ ತಕ್ಕ ಎತ್ತರ ಹಾಗೂ ಎತ್ತರಕ್ಕೆ ಸರಿಯಾಗಿ ತೂಕವಿರದ ಮಕ್ಕಳನ್ನು `ಅಪೌಷ್ಠಿಕತೆಯಿಂದ ಕೂಡಿದ ಮಗು’ ಎಂಬ ಪಟ್ಟಿಗೆ ಸೇರಿಸಲಾಗುತ್ತದೆ.
ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ 73939 ಮಕ್ಕಳು ಅಂಗನವಾಡಿಗೆ ಹೋಗುತ್ತಿದ್ದಾರೆ. ಅವರ ಪೈಕಿ 5909ರಷ್ಟು ಮಕ್ಕಳಲ್ಲಿ ಕುಬ್ಜತೆ ಕಾಣಿಸಿಕೊಂಡಿದೆ. ಹಳಿಯಾಳದಲ್ಲಿ 1610, ಸಿದ್ದಾಪುರದಲ್ಲಿ 688, ಕುಮಟಾ 678, ಹೊನ್ನಾವರ 670 ಪುಠಾಣಿ ಕುಳ್ಳರಿದ್ದಾರೆ. ಅದರೊಂದಿಗೆ ಯಲ್ಲಾಪುರ 565, ಜೊಯಿಡಾದಲ್ಲಿ 419, ಮುಂಡಗೋಡದಲ್ಲಿ 404, ಭಟ್ಕಳದಲ್ಲಿ 334, ಅಂಕೋಲಾ 332, ಕಾರವಾರ 172 ಹಾಗೂ ಶಿರಸಿಯಲ್ಲಿ 37 ಮಕ್ಕಳು ಕುಳ್ಳರಾಗಿದ್ದಾರೆ. ಈ ಪೈಕಿ 1280 ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದು, 71 ಮಕ್ಕಳು ತೀವೃ ಪ್ರಮಾಣದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ತೂಕ ಹಾಗೂ ಎತ್ತರ ಕಡಿಮೆಯಿದ್ದ ಮಾತ್ರಕ್ಕೆ ಆ ಮಗುವಿನ ಚಟುವಟಿಕೆಗಳಲ್ಲಿ ಯಾವದೇ ಸಮಸ್ಯೆ ಇಲ್ಲ. `ಕುಳ್ಳ ಮಗು’ವಾಗಿರುವ ಕಾರಣ ಬೇರೆಯವರ ನಿಂದನೆಯಿoದ ಮಾನಸಿಕವಾಗಿ ಕುಗ್ಗುವ ಸಾಧ್ಯತೆಗಳಿದ್ದು, ಆ ಕೀಳರಿಮೆಯಿಂದ ಹೊರಬರುವಂತೆ ನೋಡಿಕೊಳ್ಳುವುದು ಪಾಲಕರ ಕರ್ತವ್ಯ.