ಯಲ್ಲಾಪುರದ ಕಾಳಮ್ಮ ನಗರದಲ್ಲಿನ ಒಂದು ಪ್ರದೇಶಕ್ಕೆ ಈವರೆಗೂ ವಿದ್ಯುತ್ ಪೂರೈಕೆ ಆಗಿಲ್ಲ. ಅಲ್ಲಿನ ಜನರ ಸಂಚಾರಕ್ಕೆ ರಸ್ತೆಯಿಲ್ಲ. ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಮನೆ ಮನೆಗೆ ಶೌಚಾಲಯ ಸಹ ಇಲ್ಲ!
ಅಂಥ ಪ್ರದೇಶಕ್ಕೆ ಬಿಜೆಪಿಗರು ಭೇಟಿ ನೀಡಿದ್ದು, ಅಲ್ಲಿನವರ ಸಮಸ್ಯೆ ಆಲಿಸಿದ್ದಾರೆ. ಕನಿಷ್ಟ ಮೂಲಭೂತ ಸೌಕರ್ಯವೂ ಸಿಗದ ಜನರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. `ಇಲ್ಲಿನ ಜನ ನಿತ್ಯ ಕೂಲಿ ಕೆಲಸ ಮಾಡಿ ಬದುಕುತ್ತಿದ್ದು, ಇಷ್ಟು ವರ್ಷ ಕಳೆದರೂ ರಸ್ತೆ, ವಿದ್ಯುತ್, ನೀರು ಹಾಗೂ ಶೌಚಾಲಯವಿಲ್ಲದೇ ಸಮಸ್ಯೆ ಅನುಭವಿಸುತ್ತಿರುವುದು ಶೋಚನೀಯ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರು ಹೇಳಿದ್ದಾರೆ. ಇಲ್ಲಿನ ಜನರಿಗೆ ಅಗತ್ಯ ಸೌಕರ್ಯ ಒದಗಿಸುವ ಬಗ್ಗೆ ತಹಶೀಲ್ದಾರರನ್ನು ಭೇಟಿ ಮಾಡಿ ಚರ್ಚಿಸುವ ಆಶ್ವಾಸನೆ ನೀಡಿದ್ದಾರೆ. ಜೊತೆಗೆ, ಅದೇ ಭಾಗದ ನಾಲ್ವರನ್ನು ಅವರು ಬಿಜೆಪಿ ಪದಾಧಿಕಾರಿಯನ್ನಾಗಿ ಮಾಡಿದ್ದು, ಪಕ್ಷ ಸಂಘಟನೆಯ ಪ್ರಯತ್ನವನ್ನು ನಡೆಸಿದ್ದಾರೆ.
`ಇಲ್ಲಿನ ಪರಿಶಿಷ್ಟ ಸಮುದಾಯದ ಜನ ಕನಿಷ್ಟ ಸೌಕರ್ಯವಿಲ್ಲದೇ ಸಮಸ್ಯೆಯಲ್ಲಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿಯೇ ಈ ಬಗೆಯ ಸಮಸ್ಯೆಯಿದ್ದರೂ ಅದನ್ನು ಆಲಿಸಿದವರಿಲ್ಲ. ಈ ಹಿನ್ನಲೆ ಅವರಿಗೆ ನ್ಯಾಯ ಒದಗಿಸಲು ಬಿಜೆಪಿ ಬದ್ಧವಾಗಿದ್ದು, ಈ ವಿಷಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ’ ಎಂದು ಪ್ರಸಾದ ಹೆಗಡೆ ಅವರು ಹೇಳಿದ್ದಾರೆ. ಪ್ರಮುಖರಾದ ಸೋಮೇಶ್ವರ ನಾಯ್ಕ, ಪ್ರದೀಪ ಯಲ್ಲಾಪುರಕರ, ಗಣೇಶ ಪಾಟಣಕರ, ತುಳಸಿದಾಸ ನಾಯ್ಕ, ಶ್ಯಾಮ ಆಚಾರಿ ಮತ್ತು ಸತೀಶ ರೆವಣಕರ ಅವರು ಜೊತೆಗಿದ್ದರು.