ಮಹಾರಾಷ್ಟ್ರದ ಕಡಲ ತೀರದಿಂದ ಹೊರಟ ಆಮೆಯೊಂದು 3500ಕಿಮೀ ಕ್ರಮಿಸಿ ಕಾರವಾರ ತಲುಪಿದೆ. ಕಳೆದ 12 ದಿನಗಳಿಂದ ಈ ಆಮೆ ಕಾರವಾರ ಕಡಲತೀರದ ಹೊರ ವಲಯದಲ್ಲಿ ಓಡಾಡುತ್ತಿದೆ.
ಆಮೆ ಅತ್ಯಂತ ನಿಧಾನವಾಗಿ ಚಲಿಸುವ ಜೀವಿಯಾಗಿ ಪ್ರಸಿದ್ಧಿಪಡೆದಿದ್ದರೂ, ಸಾವಿರಾರು ಕಿಮೀ ಚಲಿಸಿದ ಉದಾಹರಣೆಗಳಿವೆ. ಅದರಂತೆ, ಇದೀಗ ಅಂಥಹುದೇ ಒಂದು ಆಮೆ ಕಾರವಾರದ ಬಳಿ ಕಾಣಿಸಿಕೊಂಡಿದೆ. 2025ರ ನವೆಂಬರ್ನಲ್ಲಿ ಮಹಾರಾಷ್ಟ್ರದ ದಹಾನು ಕರಾವಳಿಯಲ್ಲಿ ಆಮೆಯೊಂದು ಮೀನುಗಾರರ ಬಲೆಗೆ ಬಿದ್ದಿತ್ತು. ಆಲಿವ್ ರೆಡ್ಲಿ ಪ್ರಭೇದದ ಹೆಣ್ಣು ಆಮೆಯನ್ನು ರಕ್ಷಿಸಿ ಅದಕ್ಕೆ `ಧವಳ ಲಕ್ಷ್ಮೀ’ ಎಂದು ವಿಜ್ಞಾನಿಗಳು ಹೆಸರಿಟ್ಟಿದ್ದರು. ಆ ಆಮೆಗೆ ವೈಲ್ಡ್ಲೈಪ್ ಇನ್ಸ್ಟ್ಯೂಟ್ ಆಫ್ ಇಂಡಿಯಾದ ವಿಜ್ಞಾನಿ ಸುರೇಶ ಹಾಗೂ ಮಹಾರಾಷ್ಟ್ರ ಮ್ಯಾಂಗ್ರೋವ್ ಫೌಂಡೇಶನ್ ತಂತ್ರಜ್ಞರು ಸೆಟಲೈಟ್ ಡಿವೈಸ್ ಅಳವಡಿಸಿ ಸಮುದ್ರಕ್ಕೆ ಬಿಟ್ಟಿದ್ದರು. ತಾಂತ್ರಿಕ ಡಿವೈಸ್ ಹೊಂದಿದ ಆಮೆ ಇದೀಗ ಕಾರವಾರದವರೆಗೆ ಬಂದಿದ್ದು, ವಿಜ್ಞಾನಿಗಳು ಆ ಆಮೆಯ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುತ್ತಿದ್ದಾರೆ.
ಆಮೆ ಓಡಾಟದ ಮಾರ್ಗವನ್ನು ಮ್ಯಾಂಗ್ರೋವ್ ಫೌಂಡೇಶನ್ ಆಫ್ ಮಹಾರಾಷ್ಟ್ರ ನಿರಂತರವಾಗಿ ಅನುಸರಿಸಿ ಅದರ ವರದಿಯನ್ನು ನೀಡುತ್ತಿದೆ. `ಧವಳ ಲಕ್ಷ್ಮೀ ಮಹಾರಾಷ್ಟ್ರ ಕರಾವಳಿಯಿಂದ ಪಶ್ಚಿಮಕ್ಕೆ ಆಳ ಸಮುದ್ರ ದಾಟಿ ಓಮನ್ ಸಮೀಪದ ಮಸೀರಾ ದ್ವೀಪದವರೆಗೂ ತಲುಪಿತ್ತು. ನಂತರ ವಾಪಸ್ ಬಂದಿದ್ದು, ಈಗ ಕಾರವಾರ ಕಾಂಟಿನೆoಟ್ ಶೆಲ್ ಬ್ರೇಕರ್ ಪ್ರದೇಶದಲ್ಲಿ ಓಡಾಡುತ್ತಿದೆ. ಇದೇ ಆಮೆ ಕೇರಳ, ಮುರುಡೇಶ್ವರ ಸೇರಿ ವಿವಿಧ ಪ್ರದೇಶಗಳಿಗೂ ಓಡಾಟ ನಡೆಸಿದೆ.
`ಆಮೆಗಳು ಆಹಾರವನ್ನು ಹುಡುಕಿ ಓಡಾಟ ನಡೆಸುತ್ತವೆ. ಕೆಲ ಆಮೆಗಳು ಒಂದೇ ವರ್ಷದಲ್ಲಿ ಸಾವಿರಾರು ಕಿಮೀ ಸಂಚರಿಸಿದ ಉದಾಹರಣೆಗಳಿವೆ. ಎಲ್ಲಿಯೇ ಹೊದರೂ ಆ ಆಮೆಗಳು ಮತ್ತೆ ಮೂಲ ಸ್ಥಾನಕ್ಕೆ ಬರುತ್ತವೆ’ ಎಂಬುದು ಸಾಗರ ವಿಜ್ಞಾನಿ ಡಾ ಶಿವಕುಮಾರ ಹರಗಿ ಅವರ ಮಾತು.