ಉತ್ತರ ಕನ್ನಡ ಉಸ್ತುವಾರಿ ಸಚಿವರಾಗಿದ್ದ ಮಂಕಾಳು ವೈದ್ಯ ಅವರು ಭಟ್ಕಳದ ಹೆಬಳೆ-ವೆಂಕಟಾಪುರ ಹೊಳೆಯಲ್ಲಿ ಕೆಂಪು ಮಣ್ಣು ದಾಸ್ತಾನು ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಮಂಕಾಳು ವೈದ್ಯ ಅವರ ಪುತ್ರಿ ಬೀನಾ ವೈದ್ಯ ಹಾಗೂ ಸಹೋದರ ಈರಪ್ಪ ಸುಬ್ಬ ಮೊಗೇರ್ ಅವರ ವಿರುದ್ಧ ಆ ಭಾಗದ ಜನ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
`ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವೆಂಕಟಾಪುರ ಹೊಳೆ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣ ಉದ್ದೇಶದಿಂದ ಕಾಡು ಮರಗಳನ್ನು ಕಡಿಯಲಾಗಿದೆ. ಸಿಆರ್‌ಜಡ್ ನಿಯಮ ಉಲ್ಲಂಘಿಸಿ ಅಲ್ಲಿನ ಹೊಳೆಗೆ ಮಣ್ಣು ತುಂಬಲಾಗಿದೆ. ಇದರಿಂದ ಜಲಜರಗಳ ಜೀವನಕ್ಕೆ ತೊಂದರೆಯಾಗಿದ್ದು, ನೀರಿನ ಸಹಜ ಹರಿವಿಗೂ ಅಡ್ಡಿಯಾಗಿದೆ’ ಎಂಬುದು ಗ್ರಾಮಸ್ಥರ ದೂರು. `ಮಳೆಗಾಲದಲ್ಲಿ ನೀರಿನ ಹರಿವು ತಡೆಯಲ್ಪಟ್ಟ ಪರಿಣಾಮ ಹಿಂಬದಿ ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗುತ್ತಿದೆ’ ಎಂದು ಅಲ್ಲಿನ ಜನ ಆತಂಕವ್ಯಕ್ತಪಡಿಸಿದ್ದಾರೆ.
`ಈಚೆಗೆ ನಡೆದ ದುರಂತದಲ್ಲಿ ಅನೇಕ ಸಾವು-ನೋವಾಗಿದೆ. ಇದಕ್ಕೆ ಹೊಳೆಗೆ ಮಣ್ಣು ತುಂಬಿಸಿರುವುದೇ ಪ್ರಮುಖ ಕಾರಣ’ ಎಂದು ಜನ ದೂರಿದ್ದಾರೆ. `ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಅವರ ಮಗಳು ಬೀನಾ ಮಂಕಾಳ ವೈದ್ಯ ಹಾಗೂ ಸಹೋದರ ಈರಪ್ಪ ಸುಬ್ಬ ಮೊಗೇರ ಅವರು ಹೊಳೆಯಲ್ಲಿ ಅನಧಿಕೃತವಾಗಿ ಕೆಂಪು ಮಣ್ಣು ತುಂಬಿದ್ದಾರೆ. ಹೊಳೆಯಲ್ಲಿ ತುಂಬಿರುವ ಕೆಂಪು ಮಣ್ಣನ್ನು ಕೂಡಲೇ ತೆರವುಗೊಳಿಸಬೇಕು. ಪರಿಸರ ಹಾನಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅಲ್ಲಿನವರು ಒತ್ತಾಯಿಸಿದ್ದಾರೆ.