ದುಡಿದು ತಿನ್ನಲು ತ್ರಾಣವಿಲ್ಲದ ಕಾರಣ ಗಾಂಜಾ ಮಾರಾಟದಿಂದ ಬದುಕು ರೂಪಿಸಿಕೊಳ್ಳಲು ಹೊರಟಿದ್ದ ಯಲ್ಲಾಪುರದ ದೊಡ್ಡಯಲವಳ್ಳಿಯ ಬಯ್ಯಾ ಕೋಕರೆ ಪೊಲೀಸರ ಅತಿಥಿಯಾಗಿದ್ದಾರೆ. 50 ಸಾವಿರ ರೂ ಮೌಲ್ಯದ ಗಾಂಜಾಹಿಡಿದು ಗಿರಾಕಿ ಹುಡುಕುತ್ತಿದ್ದ ಬಯ್ಯಾ ಕೋಕರೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಯಲ್ಲಾಪುರದ ತಾಲೂಕಿನ ದೊಡ್ಡಯಲವಳ್ಳಿಯಲ್ಲಿ ಬಯ್ಯಾ ವಾಗು ಕೋಕರೆ ಅವರು ವಾಸವಾಗಿದ್ದರು. 64 ವರ್ಷದ ಅವರು ಗಾಂಜಾ ಮಾರಾಟ ಮಾಡಿ ಬದುಕುವ ನಿರ್ಧಾರ ಮಾಡಿದ್ದರು. ಬುಧವಾರ ಬೆಳಗ್ಗೆ 860 ಗ್ರಾಂ ಗಾಂಜಾಹಿಡಿದು ಅವರು ದೊಡ್ಡಯಲವಳ್ಳಿಯ ತಿರುವಿನಲ್ಲಿ ನಿಂತಿದ್ದರು. ಅಲ್ಲಿ ಬರುವ ಜನರನ್ನು ಮಾತನಾಡಿಸಿ, ಗಾಂಜಾ ಸೇವಿಸುವಂತೆ ಪ್ರಚೋದಿಸುತ್ತಿದ್ದರು. ಅಜ್ಜನ ಅಕ್ರಮದ ವಿರುದ್ಧ ಅಲ್ಲಿನವರೊಬ್ಬರು ಪೊಲೀಸರಿಗೆ ಫೋನ್ ಮಾಡಿದರು. ವಯಸ್ಸಾದರೂ ಬುದ್ದಿ ಬರದ ಅಜ್ಜ ಯುವ ಜನರ ಹಾದಿ ತಪ್ಪಿಸುತ್ತಿರುವುದಾಗಿ ಜನ ದೂರಿದರು.
ತಡಮಾಡದ ಪೊಲೀಸರು ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಪೊಲೀಸ್ ಅಧೀಕ್ಷಕ ದೀಪನ್ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ ಹಾಗೂ ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಪಿಐ ರಮೇಶ ಹಾನಾಪುರ ಅವರ ಸೂಚನೆ ಮೇರೆಗೆ ಪಿಸೈ ರಾಜಶೇಖರ ವಂದಲಿ ಅವರ ತಂಡ ದೊಡ್ಡಯಲವಳ್ಳಿ ಕಡೆ ಚಲಿಸಿತು. ಪಿಸೈ ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ, ಶೇಡಜಿ ಚವ್ಹಾಣ, ಎಎಸ್‌ಐ ಶರಣಬಸವ, ಪೊಲೀಸ್ ಸಿಬ್ಬಂದಿ ದೀಪಕ ಸೋಮವಂಶಿ, ಉಮೇಶ ತುಂಬರಗಿ, ಸಿಪಿಸಿ ಸಂತೋಷ ಬಾಳೇರ, ಸುರೇಶ ಕಂಟ್ರಾಕ್ಟರ್, ಬಸವರಾಜ ಡಿಕೆ, ಕೆ ಎಚ್ ಮಾರುತಿ ಸೇರಿ ಆರೋಪಿಯನ್ನು ಬಂಧಿಸಿದರು.