ಅಕ್ರಮ ಕಟ್ಟಡವನ್ನು ಸಕ್ರಮ ಎಂದು ದಾಖಲೆ ಸೃಷ್ಠಿಸಲು ಸಾಧ್ಯವಾಗದ ಕಾರಣ ಕುಮಟಾ ಪುರಸಭೆಯಲ್ಲಿ ಕಂದಾಯ ನಿರೀಕ್ಷಕ ವೆಂಕಟೇಶ ಆರ್ ಅವರು ಕಣ್ಮರೆಯಾಗಿದ್ದಾರೆ. ಇದಕ್ಕೂ ಮುನ್ನ ಅವರು ಅಕ್ರಮ-ಅವ್ಯವಹಾರಗಳ ಬಗ್ಗೆ ಪತ್ರ ಬರೆದಿದ್ದು, ಅದರಲ್ಲಿ ಶಾಸಕ ದಿನಕರ ಶೆಟ್ಟಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ಹೆಸರು ಉಲ್ಲೇಖಿಸಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ವೆಂಕಟೇಶ ಆರ್ ಅವರು ಭಟ್ಕಳ ಮೂಲದವರಾಗಿದ್ದಾರೆ. ಅವರ ತಂದೆ ನಂತರ ಅನುಕಂಪದ ಆಧಾರದಲ್ಲಿ ಈ ಹುದ್ದೆಗೆ ಬಂದಿದ್ದರು. ರಾಷ್ಟಿಯ ಹೆದ್ದಾರಿ ಅಂಚಿನಲ್ಲಿರುವ ವಿನಾಯಕ ಹೊಟೇಲ್ ಅನಧಿಕೃತವಾಗಿದ್ದರೂ ಆ ಕಟ್ಟಡಕ್ಕೆ ಅಧಿಕೃತ ಮುದ್ರೆ ಒತ್ತುವಂತೆ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರು ಒತ್ತಡ ತಂದಿದ್ದರು. ಆದರೆ, ಇದಕ್ಕೆ ವೆಂಕಟೇಶ ಆರ್ ಅವರು ಒಪ್ಪಿರಲಿಲ್ಲ. ಹೀಗಾಗಿ ಎಂ ಆರ್ ಸ್ವಾಮಿ ಅವರು ವೆಂಕಟೇಶ್ ಆರ್ ಅವರನ್ನು ಸಾರ್ವಜನಿಕವಾಗಿ ನಿಂದಿಸಿದ್ದರು.
ವೆoಕಟೇಶ್ ಆರ್ ಅವರು ಬರೆದ ಪತ್ರದ ಪ್ರಕಾರ, ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರಿಗೆ ಆ ಕಟ್ಟಡವನ್ನು ಅಧಿಕೃತಗೊಳಿಸಲು ಶಾಸಕ ದಿನಕರ ಶೆಟ್ಟಿ ಅವರ ಒತ್ತಡವಿತ್ತು. ಜೊತೆಗೆ ಈ ಕೆಲಸ ಆದರೆ ಎಂ ಆರ್ ಸ್ವಾಮಿ ಅವರಿಗೆ 4 ಲಕ್ಷ ರೂ ಹಣ ಸಿಗುತ್ತಿತ್ತು. ಹೀಗಾಗಿ ಎಂ ಆರ್ ಸ್ವಾಮಿ ಅವರು ತಮ್ಮ ಅಧೀನ ಅಧಿಕಾರಿ ವೆಂಕಟೇಶ ಆರ್ ಅವರ ಮೂಲಕ ಆ ಕೆಲಸ ಮಾಡಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ವೆಂಕಟೇಶ್ ಆರ್ ಅವರು ಒಪ್ಪದ ಕಾರಣ ಬೈಗುಳ ಸ್ವೀಕರಿಸುತ್ತಿದ್ದರು.
ಕಳೆದ ಎರಡು ತಿಂಗಳಿನಿAದ ವೆಂಕಟೇಶ್ ಆರ್ ಅವರು ಇದೇ ವಿಷಯವಾಗಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು. ಪುರಸಭೆಗೆ ಮುಖ್ಯಾಧಿಕಾರಿಯಾಗಿ ಎಂ ಆರ್ ಸ್ವಾಮಿ ಬಂದ ದಿನದಿಂದಲೂ ವೆಂಕಟೇಶ್ ಆರ್ ಅವರನ್ನು ಹಿಯಾಳಿಸುತ್ತಿದ್ದರು. ಅಕ್ಟೊಬರ್ 7ರಂದು ಸಂಜೆ ಎಲ್ಲರ ಮುಂದೆ ಕಾನೂನುಬಾಹಿರ ಕೆಲಸ ಮಾಡುವಂತೆ ಸೂಚನೆ ನೀಡಿದ್ದು, ಆಗಲೂ ವೆಂಕಟೇಶ್ ಆರ್ ಅವರು ಒಪ್ಪಲಿಲ್ಲ. ಆಗ, `ನೀನು ಕೀಳು ಜಾತಿಯವ’ ಎಂದು ಎಂ ಆರ್ ಸ್ವಾಮಿ ಅವರು ನಿಂದಿಸಿದರು. ಜೊತೆಗೆ `ನಿನ್ನ ತಂದೆಯ ಹಾಗೇ ನಿನ್ನ ಬುದ್ದಿ’ ಎಂದು ಹಿಯಾಳಿಸಿದರು.
ಈ ವೇಳೆ ಎಂ ಆರ್ ಸ್ವಾಮಿ ಅವರು ಮದ್ಯಪಾನ ಮಾಡಿದ ಆರೋಪವನ್ನು ಎದುರಿಸುತ್ತಿದ್ದು, `ಈ ಕೆಲಸ ಮಾಡದೇ ಇದ್ದರೆ ನೋಟಿಸ್ ಕೊಡುವೆ. ನಿನ್ನ ಕೆಲಸದಿಂದ ತೆಗೆಯುವೆ’ ಎಂದು ಬೆದರಿಸಿದ ಬಗ್ಗೆ ವೆಂಕಟೇಶ್ ಆರ್ ಅವರು ತಾವು ಬರೆದಿಟ್ಟ ಪತ್ರದಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. `ತಂದೆ-ತಾಯಿ ಬಗ್ಗೆ ಕೆಟ್ಟದಾಗಿ ಬೈದಿರುವುದನ್ನು ಸಹಿಸಲಾಗುತ್ತಿಲ್ಲ. ತಮ್ಮನನ್ನು ಚನ್ನಾಗಿ ನೋಡಿಕೋ’ ಎಂದು ವೆಂಕಟೇಶ್ ಆರ್ ಅವರು ತಾಯಿಗೆ ಬರೆದ ಪತ್ರ ಹರಿದಾಡುತ್ತಿದೆ.