ಜೊಯಿಡಾದ ರಾಮನಗರದ ಬಳಿ ನಾಲ್ಕು ವಾಹನಗಳ ನಡುವೆ ಒಟ್ಟಿಗೆ ಅಪಘಾತ ನಡೆದಿದೆ. ಈ ಸರಣಿ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನಪ್ಪಿದ್ದು, ಏಳು ಜನ ಗಾಯಗೊಂಡಿದ್ದಾರೆ.
ರಾಮನಗರ ಸಮೀಪದ ಜಗಲಬೆಟ್ ಸಮೀಪ ನಾಲ್ಕು ವಾಹನಗಳ ನಡುವೆ ಡಿಕ್ಕಿಯಾಗಿದೆ. ಕಾರವಾರ – ರಾಮನಗರ ರಸ್ತೆಯ ಕೃಷ್ಣ ದೇವಸ್ಥಾನದ ಅಪಾಯಕಾರಿ ತಿರುವಿನಲ್ಲಿ ಈ ಅವಘಡ ನಡೆದಿದೆ. ಅಪಘಾತಕ್ಕೆ ಟಿಪ್ಪರ್ ಕಾರಣವಾಗಿದ್ದು, ಆ ಟಿಪ್ಪರ್ ಚಾಲಕ ಅಲ್ಲಿಯೇ ಸಾವನಪ್ಪಿದ್ದಾರೆ. ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಟಿಪ್ಪರ್‌ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ನಿಸ್ಸಾನ್ ಕಾರು, ಬೊಲೆರೊ ಜೀಪಿಗೆ ಗುದ್ದಿದೆ. ಅದಾದ ನಂತರ ಆ ಟಿಪ್ಪರ್ ಬೈಕಿಗೆ ಡಿಕ್ಕಿ ಹೊಡೆದಿದೆ. ಕುಮಟಾ ಮೂಲದ ಟಿಪ್ಪರ್ ಚಾಲಕ ಬಾಬು ಅವರು ರಕ್ತದ ಮೊಡವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದಾರೆ.
ಈ ಸರಣಿ ಅಪಘಾತದಲ್ಲಿ ವಿವಿಧ ವಾಹನಗಳಲ್ಲಿದ್ದ ಒಟ್ಟು ಏಳು ಜನರಿಗೆ ಗಾಯವಾಗಿದೆ. ಅಪಘಾತದ ಸದ್ದು ಕೇಳಿ ಜನ ಜಮಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಮೊದಲು ರಾಮನಗರ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿ ಹಾಗೂ ಬೆಳಗಾವಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದ್ದು, ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ಬದಿಗೆ ಸರಿಸಿದ್ದಾರೆ.