ಮಕ್ಕಳಲ್ಲಿ ಸಂಸ್ಕಾರ, ಶಿಸ್ತು, ನೈತಿಕ ಮೌಲ್ಯ ಮತ್ತು ಸಮಾಜಮುಖಿ ಚಿಂತನೆ ಬೆಳೆಸುವ ಉದ್ದೇಶದಿಂದ ವಿವಿಧ ಮಠಾಧಿಪತಿಗಳು ಒಂದಾಗಿದ್ದಾರೆ. ಎಲ್ಲಾ ಮಕ್ಕಳಿಗೂ ಏಕರೂಪದ ಸಾಮಾನ್ಯ ಸಂಸ್ಕಾರ ಶಿಕ್ಷಣ ಹಾಗೂ ಎಲ್ಲ ನಾಗರಿಕರಿಗೂ ಏಕರೂಪದ ಆಚಾರ ಸಂಹಿತೆ ನೀಡುವ ಬಗ್ಗೆ ಸಂತರೆಲ್ಲರೂ ಸೇರಿ ಚರ್ಚಿಸಿದ್ದಾರೆ.
ಹರಿಹರಪುರ ಮಠದ ಮಠಾಧೀಶ ಸ್ವಯಂಪ್ರಕಾಶ ಸಚ್ಚಿದಾನಂದ ಶ್ರೀಗಳು, ಕೈಲಾಸಾಶ್ರಮದ ಜಯೇಂದ್ರ ಪುರಿ ಶ್ರೀಗಳು ಹಾಗೂ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆದ ಸಭೆಯಲ್ಲಿ 15ಕ್ಕೂ ಅಧಿಕ ಸಂತರು ಭಾಗವಹಿಸಿದ್ದಾರೆ. ಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ಬೆಂಗಳೂರಿನ ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ, ಬಣ್ಣದ ಮಠದ ಶಿವಲಿಂಗ ಮಹಾಸ್ವಾಮೀಜಿ, ಶೀಗೇಹಳ್ಳಿ ಮಠದ ಪ್ರಣವಾನಂದ ಸ್ವಾಮೀಜಿ, ಯಡೋದಾದ ಮಾತಾ ನಿರ್ಮಲಾನಂದಾದೇವಿ, ಹಳಿಯಾಳದ ಭವೇಶಾನಂದ ಶ್ರೀಗಳು, ಸಾಲಗಾಂವದ ವಿರೂಪಾಕ್ಷೇಶ್ವರ ಮಹಾರಾಜರು, ಮುಂಡಗೋಡದ ಬೌದ್ಧ ಲಾಮಾಗಳಾದ ಗುನಡುನ್ ಗ್ಯಾಸ್ಟೋ ಹಾಗೂ ಜಂಪಾ ಲೋಬಸಂಗ್, ತಡಸದ ಮಾತಾ ನಂದಾದೇವಿ, ಹನುಮಾಪುರದ ಸೋಮಶೇಖರ ಶಿವಾಚಾರ್ಯ ಹಾಗೂ ಮುಂಡಗೋಡದ ರುದ್ರಮುನಿ ಸ್ವಾಮೀಜಿಗಳು ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
`ಭಾರತೀಯ ಸಂಸ್ಕೃತಿಯ ಶಿಕ್ಷಣದಿಂದ ಮಕ್ಕಳು ಪರಿಪೂರ್ಣ ವ್ಯಕ್ತಿಗಳಾಗಿ ಬೆಳೆಯಲು ಸಮಾಜದ ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದು ಸಂತರು ಅಭಿಪ್ರಾಯಪಟ್ಟಿದ್ದಾರೆ. `ಮಕ್ಕಳ ವ್ಯಕ್ತಿತ್ವ ಸಮಗ್ರವಾಗಿ ವಿಕಸನಗೊಳ್ಳಲು ಮೌಲ್ಯಯುತವಾದ ಶಿಕ್ಷಣವನ್ನು ನೀಡುವಂತಾಗಬೇಕು. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ನೀಡಬೇಕಾದ ಅನೇಕ ಜೀವನ ಮೌಲ್ಯಗಳನ್ನು ನೀಡಲು ಮರೆತಿದ್ದು, ಈ ಕೊರತೆ ನೀಗಿಸಬೇಕಿದೆ’ ಎಂದು ಸಭೆಯಲ್ಲಿ ಅಭಿಪ್ರಾಯ ಕೇಳಿ ಬಂದಿದೆ. `ಭಾರತೀಯ ಸಂಸ್ಕೃತಿ, ಮೌಲ್ಯಗಳು ಹಾಗೂ ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದ್ದು, ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಬಾಲ್ಯದಲ್ಲಿಯೇ ಸೂಕ್ತ ಮಾರ್ಗದರ್ಶನ ನೀಡಬೇಕು. ಈ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ದೇಶಭಕ್ತಿ, ಧಾರ್ಮಿಕ ಸಹಿಷ್ಣುತೆ, ಹಿರಿಯರಿಗೆ ಗೌರವ, ಕುಟುಂಬ ಮೌಲ್ಯಗಳು, ನೈತಿಕತೆ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿ ಸೇರಿದಂತೆ ಭಾರತೀಯ ಸಂಸ್ಕೃತಿಯ ಮೂಲಭೂತ ಅಂಶಗಳನ್ನು ಪರಿಚಯಿಸಬೇಕು’ ಎಂದು ಶ್ರೀಗಳು ಹೇಳಿದ್ದಾರೆ.
`ಈ ಸಂಸ್ಕಾರ ಶಿಕ್ಷಣ ಕಾರ್ಯಕ್ರಮವು ಎಂಟು ವರ್ಷಗಳ ಅವಧಿಯದ್ದಾಗಿದ್ದು, ಸಂತರ ಮಾರ್ಗದರ್ಶನದಲ್ಲಿ ವಿಶೇಷ ತರಬೇತಿ ಪಡೆದ ಬೋಧಕರಿಂದ ಪಾಠ ಬೋಧನೆ ನಡೆಯಲಿದೆ. ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಸಾಮಾನ್ಯ ಸಂಸ್ಕಾರ ಕೇಂದ್ರಗಳ ಮೂಲಕ ಕ್ರಮಬದ್ಧ ಶಿಕ್ಷಣ ನೀಡಲಾಗುತ್ತದೆ. ಯಾವುದೇ ಜಾತಿ, ಮತ, ಭಾಷೆ ಅಥವಾ ಸಾಮಾಜಿಕ ಬೇಧಭಾವವಿಲ್ಲದೆ ಎಲ್ಲ ಮಕ್ಕಳಿಗೂ ಸಮಾನ ವೇದಿಕೆಯಲ್ಲಿ ಶಿಕ್ಷಣ ಕಲ್ಪಿಸಲಾಗುತ್ತದೆ’ ಎಂದು ಸಭೆ ಮೂಲಕ ತಿಳಿಸಲಾಗಿದೆ. `ಈ ಶಿಕ್ಷಣದ ಅವಧಿಯನ್ನು 2ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ಸಂಜೆ 4ರಿಂದ 5 ಗಂಟೆಯವರೆಗೆ ಹಾಗೂ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ಭಾನುವಾರ ಸಂಜೆ 4ರಿಂದ 5 ಗಂಟೆಯವರೆಗೆ ನಿಗದಿಪಡಿಸಲಾಗಿದೆ. ಜೊತೆಗೆ ಕುಮಟಾದಲ್ಲಿ ಭಾರತೀಯ ಸಂತ ಮಹಾಪರಿಷತ್ ಆಶ್ರಯದಲ್ಲಿ ಮತ್ತೊಂದು ಕಾರ್ಯಕರ್ತರ ಸಮಾವೇಶವನ್ನು ಸಂತರ ಸಾನ್ನಿಧ್ಯದಲ್ಲಿ ಆಯೋಜಿಸುವ ಕುರಿತು ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ರಾಜ್ಯ ಮಟ್ಟದ ಸಂತರ ಸಭೆಯಲ್ಲಿ ನಿರ್ಣಯಿಸಲಾಗಿದೆ.