ಕಾರವಾರದ ನಂದನಗದ್ದಾ – ಸುಂಕೇರಿ ರಸ್ತೆಯಲ್ಲಿ ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿಯಾಗಿದೆ. ಈ ಅವಘಡದಲ್ಲಿ ಎರಡು ವಾಹನ ಜಖಂ ಆಗಿದೆ. ಜೊತೆಗೆ ಬೈಕಿನಲ್ಲಿದ್ದವರಿಗೆ ಗಾಯವಾಗಿದೆ.
ಜೂನ್ 10ರ ಸಂಜೆ ನೇವಲ್‌ಬೇಸಿನಲ್ಲಿ ಕೆಲಸ ಮಾಡುವ ದೇವಳಮಕ್ಕಿಯ ಗಿರೀಶ ಗೋಪಾಲ ಗೌಡ ಅವರು ತಮ್ಮ ಸಹೋದರ ಲೋಕೇಶ ಗೋಪಾಲ ಗೌಡ ಅವರ ಜೊತೆ ಬೈಕಿನಲ್ಲಿ ಹೋಗುತ್ತಿದ್ದರು. ನಂದನಗದ್ದಾದಿoದ ಸುಂಕೇರಿ ಕಡೆಗೆ ಹೋಗುತ್ತಿದ್ದ ಬೈಕು ಎದುರಿನಿಂದ ಬಂದ ರಿಕ್ಷಾಗೆ ಡಿಕ್ಕಿ ಹೊಡೆಯಿತು. ರಿಕ್ಷಾ ಚಾಲಕ ಎಸ್ ಕೆ ಅಸ್ಲಾಂ ಅವರು ವೇಗವಾಗಿ ರಿಕ್ಷಾ ಓಡಿಸುತ್ತಿದ್ದು, ಇದನ್ನು ನೋಡಿ ಗಿರೀಶ ಗೌಡ ಅವರು ದಿಢೀರ್ ಆಗಿ ಬೈಕಿನ ಬ್ರೆಕ್ ಹಾಕಿದರು. ಅದಾಗಿಯೂ, ಆ ಬೈಕು ರಿಕ್ಷಾಗೆ ಗುದ್ದಿತು. ಪರಿಣಾಮ ಬೈಕಿನಲ್ಲಿದ್ದ ಇಬ್ಬರು ರಸ್ತೆ ಮೇಲೆ ಬಿದ್ದು ಗಾಯಗೊಂಡರು.
ಈ ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ಲೋಕೇಶ ಅವರ ತಲೆಗೆ ಗಂಭೀರ ಗಾಯವಾಯಿತು. ಬೈಕ್ ಸವಾರ ಗಿರೀಶ ಅವರ ಮೂಗು ಹಾಗೂ ಎಡ ಭುಜಕ್ಕೆ ಸಣ್ಣಪುಟ್ಟ ಗಾಯವಾಯಿತು. ರಿಕ್ಷಾ ಜೊತೆ ಬೈಕ್ ಸಹ ಜಖಂ ಆಗಿದ್ದು, ಅಪಾಯಕಾರಿ ರೀತಿ ವಾಹನ ಚಲಾಯಿಸಿದ ಕಾರಣ ದೇವಳಮಕ್ಕಿಯ ಸುಬ್ರಾಯ ಸೋಮ ಗೌಡ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸಂಚಾರ ಠಾಣೆ ಪೊಲೀಸರು ರಿಕ್ಷಾ ಚಾಲಕ ಹಾಗೂ ಬೈಕ್ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.