ಭಟ್ಕಳದಲ್ಲಿ ನಡೆದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಹೊಡೆದಾಟದಲ್ಲಿ ಗಾಯಗೊಂಡವರು ಆಸ್ಪತ್ರೆ ಸೇರಿದ್ದಾರೆ.
ಭಟ್ಕಳದ ಹೆಬಳೆಯಲ್ಲಿ ಅಕ್ಟೊಬರ್ 7ರಂದು ಕಬ್ಬಡ್ಡಿ ಪಂದ್ಯಾವಳಿ ನಡೆಯುತ್ತಿತ್ತು. ಬಾಲಕರಿಗಾಗಿ ಅವರು ಈ ಆಟ ಆಯೋಜಿಸಿದ್ದು, ವಿವಿಧ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು. ಆಟದಲ್ಲಿ ಗೆಲ್ಲುವ ವಿಷಯವಾಗಿ ಎರಡು ಗುಂಪಿನ ನಡುವೆ ಸ್ಪರ್ಧೆ ನಡೆದಿದ್ದು, ಮೊದಲು ಆರೋಗ್ಯಕರವಾಗಿ ನಡೆದ ಸ್ಪರ್ಧೆ ನಂತರ ಅನಾಹುತಕ್ಕೆ ಕಾರಣವಾಯಿತು.
ಮಾವಿನಕುರ್ವಾದ ತಲಗೋಡಿನ ವ್ಯಾಪಾರಿ ಈಶ್ವರ ನಾಯ್ಕ ಅವರು ದೂರಿದ ಪ್ರಕಾರ, ಶಿರಾಲಿ ಮಾವಿನಕಟ್ಟೆಯ ಲಕ್ಷ್ಮೀಶ ದೇವಾಡಿಗ ಹಾಗೂ ರವಿ ದೇವಾಡಿಗ ಅವರು ಈ ಆಟವನ್ನು ಹಾಳು ಮಾಡಿದರು. ಈ ಪಂದ್ಯಾವಳಿ ವೀಕ್ಷಣೆಗೆ ಹೋಗಿದ್ದ ಈಶ್ವರ ನಾಯ್ಕ ಅವರಿಗೂ ಹೊಡೆದಾಟ ಬೇಸರ ಮೂಡಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಮೋಹನ ನಾಯಕ ಅವರಿಗೆ ಲಕ್ಷ್ಮೀಶ ದೇವಾಡಿಗ ಹಾಗೂ ರವಿ ದೇವಾಡಿಗ ಅವರು ಕಬ್ಬಿಣದಿಂದ ಹೊಡೆದರು. ಪರಿಣಾಮ ಮೋಹನ ಅವರು ಗಾಯಗೊಂಡಿದ್ದು, ಸದ್ಯ ಅವರು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಇದಕ್ಕೆ ಪ್ರತಿಯಾಗಿ ಲಕ್ಷ್ಮೀಶ ದೇವಾಡಿಗ ಸಹ ಪೊಲೀಸರಿಗೆ `ತಮ್ಮದೇನು ತಪ್ಪಿಲ್ಲ’ ಎಂದಿದ್ದಾರೆ. `ಹೆಬಳೆಯ ಗೊರಟಕೇರಿಯಲ್ಲಿ ಬಾಲಕರ ಕಬ್ಬಡಿ ಆಯೋಜಿಸಲಾಗಿತ್ತು. ತಾನು ಎರಡು ತಂಡ ತೆಗೆದುಕೊಂಡು ಹೋಗಿದ್ದು, ಆ ಎರಡು ತಂಡ ಉತ್ತಮವಾಗಿ ಆಡಿ ಸಮಿಫೈನಲ್ ತಲುಪಿತ್ತು. ಇದನ್ನು ಸಹಿಸದೇ ತಲಗೋಡಿನ ಸೃಜನ, ಚರಣ, ಹರ್ಷ ಹಾಗೂ ಇತರರು ಸೇರಿ ತಮ್ಮ ಮೇಲೆ ದಾಳಿ ನಡೆಸಿದ್ದಾರೆ. ಕಬ್ಬಿಣದ ಬಳೆಯಿಂದ ಹೊಡೆದು ಗಾಯ ಮಾಡಿದ್ದಾರೆ’ ಎಂದು ಲಕ್ಷ್ಮೀಶ ದೇವಾಡಿಗ ಅವರು ದೂರಿದ್ದಾರೆ.
ರವಿ ದೇವಾಡಿಗ, ಲಕ್ಷ್ಮೀಶ ದೇವಾಡಿಗ ಜೊತೆ ನ ಸೃಜನ, ಚರಣ, ಹರ್ಷ ಹಾಗೂ ಇತರರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.