ಪೊಲೀಸರ ಪ್ರಕಾರ ರೌಡಿಯಾಗಿ ಗುರುತಿಸಿಕೊಂಡಿದ್ದ ಶಿರಸಿಯ ಓಂ ಹೆಗಡೆ ಊರತೋಟ ಅವರನ್ನು ಪೊಲೀಸ್ ದೂರುಗಳ ಪ್ರಾಧಿಕಾರ `ರೌಡಿ’ ಪಟ್ಟಿಯಿಂದ ಹೊರದಬ್ಬಿದೆ. `ಕ್ರಿಮಿನಲ್ ಪ್ರಕರಣವಿದ್ದ ಮಾತ್ರಕ್ಕೆ ರೌಡಿ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಪೊಲೀಸ್ ದೂರುಗಳ ಪ್ರಾಧಿಕಾರವೂ ಹೇಳಿದೆ.
2020ರಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಓಂ ಹೆಗಡೆ ಅವರ ವಿರುದ್ಧ ರೌಡಿ ಶೀಟರ್ ಹಾಳೆ ತೆರೆಯಲಾಗಿತ್ತು. 2025ರಲ್ಲಿ ಇದರ ವಿರುದ್ಧ ಓಂ ಹೆಗಡೆ ಅವರು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಮೊರೆ ಹೋಗಿದ್ದರು. ಪ್ರಾಧಿಕಾರದ ಅಧ್ಯಕ್ಷ ಎನ್ ಕೆ ಸುಧೀಂದ್ರ ರಾವ್ ಹಾಗೂ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಮತ್ತು ದೇವಜ್ಯೋತಿ ರೇ ಅವರು ಪ್ರಕರಣದ ವಿಚಾರಣೆ ನಡೆಸಿದರು. ದೂರುದಾರ ಓಂ ಹೆಗಡೆ ಅವರು ವಿಚಾರಣೆ ವೇಳೆ ಹಾಜರಿದ್ದು, `ತನ್ನ ವಿರುದ್ಧ ಸುಳ್ಳು ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. ತಮ್ಮನ್ನು ರೌಡಿ ಎಂದು ಗುರುತಿಸಿದ್ದರಿಂದ ಅನ್ಯಾಯವಾಗಿದೆ’ ಎಂದು ಅಳಲು ತೋಡಿಕೊಂಡರು.
ಜೊತೆಗೆ ರೌಡಿ ಶೀಟರ್ ಎಂಬ ಹಣಪಟ್ಟಿಯಿಂದ ಮುಕ್ತಿ ಕೊಡುವಂತೆ ಮನವಿ ಮಾಡಿದರು. `ಯಾವುದೇ ನೋಟಿಸ್ ನೀಡದೇ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ’ ಎಂಬ ಅಂಶವನ್ನು ಅವರು ಪ್ರಾಧಿಕಾರಕ್ಕೆ ಮನವರಿಕೆ ಮಾಡಿದರು. ಈ ವಿಚಾರಣೆ ವೇಳೆ ಪೊಲೀಸರು ನೋಟಿಸ್ ನೀಡಿದ ದಾಖಲೆಯನ್ನು ಹಾಜರುಪಡಿಸಲಿಲ್ಲ. ಕ್ರಿಮಿನಲ್ ಪ್ರಕರಣವಿದ್ದ ಮಾತ್ರಕ್ಕೆ ಆತನನ್ನು ರೌಡಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸಹ ಪ್ರಾಧಿಕಾರ ಈ ವೇಳೆ ಅಭಿಪ್ರಾಯಪಟ್ಟಿತು. ಕಾನೂನಿನ ಪ್ರಕಾರ ಪ್ರತಿ ಎರಡು ವರ್ಷಗಳಿಗೊಮ್ಮೆ ರೌಡಿ ಶೀಟ್ ಆದೇಶವನ್ನು ಪರಿಶೀಲಿಸುವಲ್ಲಿಯೂ ನ್ಯೂನ್ಯತೆಯಿರುವುದನ್ನು ಗಮನಿಸಿತು. ಜೊತೆಗೆ ಓಂ ಹೆಗಡೆ ಅವರು ರೌಡಿ ಶೀಟರ್ ಪಟ್ಟಿಯಲ್ಲಿ ಮುಂದುವರೆಯಲು ಅರ್ಹರಲ್ಲ ಎಂದು ಪ್ರಾಧಿಕಾರ ಹೇಳಿದ್ದು, ರೌಡಿ ಶೀಟರ್ ಎಂದು ಗುರುತಿಸಿದನ್ನು ತಕ್ಷಣ ರದ್ದು ಮಾಡಿ ಆದೇಶಿಸಿತು.