ಕುಮಟಾ ಬಿಜೆಪಿ ಮಂಡಳ ಅಧ್ಯಕ್ಷ ಜಿ ಐ ಹೆಗಡೆ ಅವರು ದೈವಸ್ಥಾನ ಜಾಗ ಒತ್ತುವರಿ ಪ್ರಯತ್ನ ಮಾಡಿದ ಬಗ್ಗೆ ದೂರು ನೀಡಿದವರ ವಿರುದ್ಧ ಬಿಜೆಪಿ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ದೂರು ನೀಡಿದವರ ವಿರುದ್ಧವೇ ಬಿಜೆಪಿಗರು ಇದೀಗ ದೂರು ನೀಡಿದ್ದಾರೆ.
`ಕುಮಟಾ ಮೂರೂರು ಗ್ರಾಮದ ಸರ್ವೆ ನಂಬರ್ 191ರಲ್ಲಿ ಜಟಕ ದೇವರಿದ್ದು, ಆ ಭೂಮಿಯನ್ನು ದತ್ತಾತ್ರೇಯ ಭಟ್ಟ ಎಂಬಾತರು ಕಬಳಿಸುವ ಹುನ್ನಾರ ನಡೆಸಿದ್ದಾರೆ. ಅದಕ್ಕೆ ಬಿಜೆಪಿ ಮಂಡಳ ಅಧ್ಯಕ್ಷ ಜಿ ಐ ಹೆಗಡೆ ಅವರು ಬೆಂಬಲ ನೀಡಿದ್ದಾರೆ’ ಎಂದು ಮೂರೂರಿನ ಹರ್ಷ ಹೆಗಡೆ ಸಹಚರರು ತಹಶೀಲ್ದಾರರಿಗೆ ದೂರು ಸಲ್ಲಿಸಿದ್ದರು. ಈಶ್ವರ ಮುಕ್ರಿ, ವಿಷ್ಣು ಗೌಡ ಕೇರ್ಗಜನಿ, ಭಾಸ್ಕರ್ ಮಡಿವಾಳ ಮೂರೂರ್, ಈಶ್ವರ ನಾಯ್ಕ್ ಮೂರೂರು, ಕುಪ್ಪು ಗೌಡ, ವೆಂಕಟಿ ಮುಕ್ರಿ, ಮಾದೇವ ನಾಯ್ಕ್, ಭಾರತಿ ನಾಯ್ಕ್, ನಾಗೇಶ ನಾಯ್ಕ, ಗಣೇಶ ಮುಕ್ರಿ ಇನ್ನಿತರರು ಜಿ ಐ ಹೆಗಡೆ ಅವರು ಅರಣ್ಯ ಅತಿಕ್ರಮಣದ ಪರವಾಗಿದ್ದಾರೆ ಎಂದು ದೂರಿದ್ದರು. ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು. ಮರು ದಿನವೇ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜಿ ಐ ಹೆಗಡೆ ಅವರು `ತಾನೂ ಯಾವುದೇ ಅಕ್ರಮ ನಡೆಸಿಲ್ಲ’ ಎಂದಿದ್ದರು. ಅಲ್ಲಿಗೆ ಆ ವಿಷಯ ಕೆಲಕಾಲ ತಣ್ಣಗಾಗಿದ್ದು, ಇದೀಗ ಬಿಜೆಪಿ ಕಾರ್ಯಕರ್ತರು ಅದೇ ವಿಷಯವಾಗಿ ಮತ್ತೆ ತಹಶೀಲ್ದಾರ್ ಕಚೇರಿಯ ಮೆಟ್ಟಿಲೇರಿದ್ದಾರೆ. ಆ ದಿನ ಸುಳ್ಳು ಆರೋಪ ಮಾಡಿದವರ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
`ನನ್ನಿಂದ ಪಕ್ಷಕ್ಕೆ ತೊಂದರೆ ಆಗಬಾರದು. ಅದಕ್ಕಾಗಿ ಹುದ್ದೆಗೆ ರಾಜೀನಾಮೆ ನೀಡಲು ಸಿದ್ಧ’ ಎಂದು ಈ ವೇಳೆ ಜಿ ಐ ಹೆಗಡೆ ಅವರು ಹೇಳಿದರು. `ಕುಮಟಾದಲ್ಲಿ ತೊಂದರೆಗೊಳಗಾದವರ ಪರವಾಗಿ ಜಿ ಐ ಹೆಗಡೆ ಅವರು ಹೋರಾಡುತ್ತಿದ್ದಾರೆ. ಅವರು ರಾಜಿನಾಮೆ ಕೊಡುವ ಅಗತ್ಯವಿಲ್ಲ.’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಅವರು ಹೇಳಿದರು. `ಜಿ ಐ ಹೆಗಡೆ ಅವರು 22 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಅವರು ಯಾರಿಗೂ ಅನ್ಯಾಯ ಮಾಡಿಲ್ಲ’ ಎಂದು ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅವರು ಹೇಳಿದರು. `ಅರಣ್ಯ ಇಲಾಖೆಯವರು ಬಡವರ ಮೇಲೆ ದೌರ್ಜನ್ಯ ಮಾಡುತ್ತಿದ್ದು, ಅದು ನಿಲ್ಲಬೇಕು’ ಎಂದು ಸಹ ಜಿ ಐ ಹೆಗಡೆ ಅವರು ಹೇಳಿದರು. `ಜಿ ಐ ಹೆಗಡೆ ಅವರ ವಿರುದ್ಧ ಕೇಳಿ ಬಂದ ಆರೋಪದ ವಿರುದ್ಧ ಸಮಗ್ರ ತನಿಖೆ ನಡೆಯಬೇಕು. ನ್ಯಾಯ ಕೇಳಿ ಬಂದವರಿಗೆ ನ್ಯಾಯ ಒದಗಿಸಬೇಕು’ ಎಂದು ಪ್ರಮುಖರಾದ ಎಂ ಜಿ ಭಟ್, ಪ್ರಶಾಂತ ನಾಯ್ಕ, ಜಿ ಐ ಗುನಗಾ, ಕುಮಾರ ಮಾರ್ಕಾಂಡೇಯ, ಹೇಂಮತಕುಮಾರ್ ಗಾಂವಕರ, ಗಣೇಶ ಪಂಡಿತ, ತಿಮ್ಮಪ್ಪ ಮುಕ್ರಿ ಆಗ್ರಹಿಸಿದರು.