ಶಿರಸಿಯ ಬಂಡಲ್ ಗ್ರಾಮದ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬರಿಗೆ ಹೆರಿಗೆಯಾಗಿದೆ. 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗು ಸಾವನಪ್ಪಿದೆ.
ಮಾಹಿತಿಗಳ ಪ್ರಕಾರ ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋದಾಗ ಹೆರಿಗೆಯಾಗಿದ್ದು, ಆತಂಕಗೊAಡ ವಿದ್ಯಾರ್ಥಿನಿ ಮಗುವನ್ನು ಕಿಟಕಿಯಿಂದ ಹೊರಗೆ ಹಾಕಿದ್ದಾರೆ. ಆ ವೇಳೆ ಮಗು ಸಾವನಪ್ಪಿದ ಸಂಶಯವಿದೆ. ವಿದ್ಯಾರ್ಥಿನಿ ಗರ್ಭಧರಿಸಿದ್ದರೂ ಅದು ಹಾಸ್ಟೆಲ್ ವಾರ್ಡನ್ ಗಮನಕ್ಕೆ ಬಂದಿರಲಿಲ್ಲ. ಶಿಕ್ಷಕರಿಗೆ ಸಹ ಆ ವಿಷಯ ಗೊತ್ತಾಗಿರಲಿಲ್ಲ. ವಸತಿ ನಿಲಯದ ಬಳಿ ಮಹಿಳೆಯೊಬ್ಬರು ಕಸ ಗುಡಿಸುವಾಗ ನವಜಾತ ಶಿಶು ಬಿದ್ದಿರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದು, ಅದಾದ ನಂತರ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ವಿಷಯ ಹೊರಬಿದ್ದಿದೆ.
ಯಾವುದೇ ವೈದ್ಯಕೀಯ ನೆರವು ಇಲ್ಲದೇ ಮಗುವಿಗೆ ಜನ್ಮ ನೀಡಿದ ಬಾಲಕಿ ತೀವೃ ಅಸ್ವಸ್ಥರಾಗಿದ್ದು, ರಕ್ತಸ್ರಾವದಿಂದಾಗಿ ಅವರ ಆರೋಗ್ಯವೂ ಹದಗೆಟ್ಟಿದೆ. ವಿಷಯ ತಿಳಿದ ಅಧಿಕಾರಿಗಳು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿರಸಿ ತಹಶೀಲ್ದಾರ್ ಸೇರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಾಲಕಿ ಗರ್ಭ ಧರಿಸಲು ಕಾರಣ ಯಾರು? ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ದೊಡ್ಡಪ್ಪನ ಮಗನಿಂದಲೇ ಬಾಲಕಿ ಹಿಂಸೆ ಅನುಭವಿಸಿದ ಬಗ್ಗೆಯೂ ಮಾತು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.