ರಾಜ್ಯದಲ್ಲಿಯೇ ಮೊದಲ ಬಾರಿ ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಆಡಳಿತಾಧಿಕಾರಿ ಹಾಗೂ ದ್ವಿತೀಯ ದರ್ಜೆ ಸಹಾಯಕರಿಗೆ ಡೀಸಿ ಕೆ ಲಕ್ಷ್ಮೀಪ್ರಿಯ ಪದೋನ್ನತಿ ನೀಡಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಜಿಲ್ಲೆಯ 29 ನೌಕರರು ಪ್ರಥಮ ದರ್ಜೆ ಸಹಾಯಕ ಮತ್ತು ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಕoದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ದ್ವಿತೀಯ ದರ್ಜೆ ಸಹಾಯಕರಿಗೆ ಕರ್ನಾಟಕ ರಾಜ್ಯ ಕಂದಾಯ ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು 2026ರ ಅನ್ವಯ ಪ್ರಥಮ ದರ್ಜೆ ಸಹಾಯಕ ಮತ್ತು ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹುದ್ದೆಗಳಿಗೆ ಪದೋನ್ನತಿ ನೀಡಲಾಗಿದೆ. ಜಿಲ್ಲಾ ಕಂದಾಯ ಘಟಕದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಸಂಯುಕ್ತ ಜೇಷ್ಠತಾ ಪಟ್ಟಿ ಪ್ರಕಟಗೊಂಡ ಬಳಿಕ ಜೂನ್ 9ರಂದು ಇಲಾಖಾ ಮುಂಬಡ್ತಿ ಸಮಿತಿ ಸಭೆ ನಡೆಸಲಾಗಿದ್ದು, ಸಿಬ್ಬಂದಿಯ ಸೇವಾ ದಾಖಲೆಗಳು ಹಾಗೂ ನಿಯಮಾನುಸಾರ ಅರ್ಹತೆಯನ್ನು ಪರಿಶೀಲಿಸಿದ ಸಮಿತಿಯು ಪದೋನ್ನತಿಗೆ ಅನುಮೋದನೆ ನೀಡಲಾಗಿದೆ.
ಪದೋನ್ನತಿ ಆದೇಶ ಹೊರಬಿದ್ದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದವರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹಾಗೂ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರನ್ನು ಸನ್ಮಾನಿಸಿದ್ದಾರೆ. ಸಂಘದ ಜಿಲ್ಲಾಧ್ಯಕ್ಷ ಚಾಂದಬಾಷಾ ಮುಲ್ಲಾ ಅವರು ಡೀಸಿ ನಡೆಗೆ ಹರ್ಷವ್ಯಕ್ತಪಡಿಸಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಯೋಗೇಶ್ ನಾಯ್ಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯ್ಕ್ ಹಾಗೂ ಪದಾಧಿಕಾರಿಗಳು ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿ ರಕ್ಷಿತ ಪೂಜಾರಿ, ಖಜಾಂಚಿ ಚರಣ್ ಗೌಡ, ಉಪಾಧ್ಯಕ್ಷ ಕೋಟ್ರೇಶ ಎನ್.ಬಿ., ಸಂದೀಪ್, ಮಂಜುನಾಥ ನಾಯ್ಕ, ಲತಾ ನಾಯ್ಕ, ಆಶಾ ಭಟ್ಟ, ಸಂತೋಷ, ಗಣೇಶ ಕುಲಾಲ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.