ಪಡ್ಡೆ ಹುಡುಗರಿಗೆ ಮಾದಕ ವಸ್ತುಗಳ ಮಾರಾಟ ಮಾಡಿ ಬದುಕುತ್ತಿದ್ದ ಶಿರಸಿಯ ಆನಂದ ಬೋವಿವಡ್ಡರ್ ಅವರಿಗೆ ಪಿಸೈ ಬಸವರಾಜ ಕನಶೆಟ್ಟಿ ಅವರು ಬುದ್ದಿ ಹೇಳಿದ್ದಾರೆ. ಮಾದಕ ವ್ಯಸನ ಮಾರಾಟದ ಬದಲು ಮೊದಲಿನಂತೆ ಗೋಡೆಗಳಿಗೆ ಬಣ್ಣ ಬಡಿದು ಬದುಕು ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ.
ಶಿರಸಿಯ ರಾಜೀವನಗರದಲ್ಲಿ ಆನಂದ ಹನುಮಂತ ಬೋವಿವಡ್ಡರ್ ಅವರು ವಾಸವಾಗಿದ್ದರು. ತುರಮಣಿ ಎಂದು ಪ್ರಸಿದ್ಧಿಪಡೆದಿದ್ದ ಅವರು ಗೋಡೆಗಳಿಗೆ ಬಣ್ಣ ಬಡಿಯುವ ಕೆಲಸ ಮಾಡಿಕೊಂಡಿದ್ದರು. ಸಹವಾಸ ದೋಷದಿಂದ ಅವರು ಹಾಳಾಗಿದ್ದು, ಬೇಗ ದುಡ್ಡು ಮಾಡುವುದಕ್ಕಾಗಿ ಅಡ್ಡದಾರಿ ಹಿಡಿದಿದ್ದರು. ಬಣ್ಣ ಬಡಿಯುವ ಬದುಕಿಗೆ ವಿದಾಯ ಹೇಳಿ ಗಾಂಜಾ ಮಾರಾಟ ಮಾಡುವುದನ್ನು ಅರೆಕಾಲಿಕ ಉದ್ಯೋಗವನ್ನಾಗಿಸಿಕೊಂಡರು.
ಜೂನ್ 9ರ ರಾತ್ರಿ ಆನಂದ ಬೋವಿವಡ್ಡರ್ ಅವರು ಮಾರಿಕಾಂಬಾ ಕ್ರೀಡಾಂಗಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ಆ ದಿನ ಗಾಂಜಾ ಮಾರಾಟದಿಂದಲೇ ಅವರು 920ರೂ ಸಂಪಾದಿಸಿದ್ದು, ಉಳಿದ 197 ಗ್ರಾಂ ಮಾದಕ ವಸ್ತುವನ್ನು ಮಾರಾಟ ಮಾಡಿ ಮನೆಗೆ ಹೋಗಲು ನಿರ್ಧರಿಸಿದ್ದರು. ರಾತ್ರಿ 9.15ರ ವೇಳೆಗೆ ಅವರು ಗಿರಾಗಿ ಹುಡುಕಿ ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದು, ಪಿಐ ಸಂಪತಕುಮಾರ ಅವರಿಗೆ ಈ ಮಾಹಿತಿ ಸಿಕ್ಕಿತು. ಹೊಸಮಾರುಕಟ್ಟೆ ಪೊಲೀಸ್ ಠಾಣೆಯ ಪಿಸೈ ಬಸವರಾಜ ಕನಶೆಟ್ಟಿ ಅವರು ಅಲ್ಲಿಗೆ ಹೋದರು. ಪೊಲೀಸ್ ಸಿಬ್ಬಂದಿ ಸಂದೀಪ ನಿಂಬಾಯಿ, ರಾಕೇಶ್ ಎನ್ ಎಚ್, ಸಂತೋಷ ಆರ್ ಕೆ, ಅರುಣ ಲಮಾಣಿ ಹಾಗೂ ಲಕ್ಷಣ ಸೇರಿ ಆನಂದ ಬೋವಿವಡ್ಡರ್ ಅವರನ್ನು ವಿಚಾರಣೆ ನಡೆಸಿದರು.
ಆಗ, ಆನಂದ ಬೋವಿವಡ್ಡರ್ ಅವರ ಬಳಿ 10400ರೂ ಮೌಲ್ಯದ ಗಾಂಜಾ ಸಿಕ್ಕಿತು. 500ರೂಪಾಯಿಯ ಮೊಬೈಲ್ ಹಿಡಿದು ಅವರು ಗಿರಾಕಿ ಹುಡುಕಾಟ ಮಾಡುತ್ತಿರುವುದು ಗೊತ್ತಾಯಿತು. ಅವರನ್ನು ವಶಕ್ಕೆಪಡೆದ ಪೊಲೀಸರು ಬುದ್ದಿ ಹೇಳಿದ್ದು, `ತನ್ನಿಂದ ತಪ್ಪಾಯಿತು’ ಎಂದು ಆನಂದ ಬೋವಿವಡ್ಡರ್ ಒಪ್ಪಿಕೊಂಡರು. ಅದಾಗಿಯೂ, ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿದ ಪೊಲೀಸರು, ಎಚ್ಚರಿಕೆ ನೀಡಿದರು.