ಹoದಿ ಸಾಕುವ ಕೆಲಸ ಬಿಟ್ಟು ದಾಂಡೇಲಿಯಲ್ಲಿ ದಾದಾಗಿರಿ ಮಾಡುತ್ತಿದ್ದ ಬಾಬು ದೊಡ್ಡಮನಿ ಅವರನ್ನು ಪೊಲೀಸರು ಈ ಜಿಲ್ಲೆಯಿಂದ ಹೊರ ಹಾಕಿದ್ದಾರೆ. ಜೂಜಾಟ, ಲೈಂಗಿಕ ದೌರ್ಜನ್ಯ, ಹಲ್ಲೆ, ನಿಂದನೆ, ಕೊಲೆ ಯತ್ನ ಸೇರಿ ವಿವಿಧ ಪ್ರಕರಣಗಳ ಆರೋಪಿಯಾಗಿದ್ದ ಬಾಬು ದೊಡ್ಡಮನಿ ಅವರನ್ನು ಬಿದರಿಗೆ ಬಿಟ್ಟು ಬಂದಿದ್ದಾರೆ.
ದಾoಡೇಲಿಯ ಬರ್ಚಿ ರಸ್ತೆಯಲ್ಲಿ ಬಾಬು ರಾಮಪ್ಪ ದೊಡ್ಡಮನಿ ಅವರು ವಾಸವಾಗಿದ್ದರು. ಹಂದಿ ಸಾಕಾಣಿಕೆ ಹಾಗೂ ವ್ಯಾಪಾರ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಆದರೆ, ಈ ಉದ್ಯೋಗದ ಜೊತೆ ಬಾಬು ದೊಡ್ಡಮನಿ ಅವರು ದುಡ್ಡಿಗಾಗಿ ಅಡ್ಡದಾರಿ ಹಿಡಿದಿದ್ದರು. ಅವರು ನಡೆಸಿದ ಅಪರಾಧಗಳ ಹಿನ್ನಲೆ ಪೊಲೀಸರು ಒಟ್ಟು 9 ಪ್ರಕರಣಗಳನ್ನು ದಾಖಲಿಸಿದ್ದರು. ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದ್ದರು. ಅದಾಗಿಯೂ, ಸುಧಾರಣೆ ಕಾಣದ ಕಾರಣ ಬಾಬು ದೊಡ್ಡಮನಿ ಅವರ ವಿರುದ್ಧ ರೌಡಿ ಶೀಟರ್ ಹಾಳೆ ತೆರೆದಿದ್ದರು.
ಬಾಬು ದೊಡ್ಡಮನಿ ಅವರನ್ನು ರೌಡಿ ಶೀಟರ್ ಎಂದು ಗುರುತಿಸಿ ಅವರ ಮೇಲೆ ನಿಗಾವಿರಿಸಿದ ಪೊಲೀಸರಿಗೆ ಇನ್ನಷ್ಟು ವಿಷಯಗಳು ಗೊತ್ತಾದವು. ಅಪರಾಧ ಚಟುವಟಿಕೆಯಿಂದ ಹೊರಬಾರದ ಬಗ್ಗೆ ಅರಿತ ಪೊಲೀಸರು ಗಡಿಪಾರಿಗಾಗಿ ಶಿಫಾರಸ್ಸು ಮಾಡಿದರು. ದಾಂಡೇಲಿ ಪೊಲೀಸರ ಶಿಫಾರಸ್ಸು ಗಮನಿಸಿದ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಬಾಬು ದೊಡ್ಡಮನಿ ಅವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದರು. ಮುಂದಿನ ಆರು ತಿಂಗಳವರೆಗೆ ಬಾಬು ದೊಡ್ಡಮನಿ ಅವರು ಉತ್ತರ ಕನ್ನಡ ಜಿಲ್ಲೆಗೆ ಬರುವ ಹಾಗಿಲ್ಲ ಎಂದು ಪೊಲೀಸರು ಆದೇಶಿಸಿದರು.
ಈ ಎಲ್ಲಾ ಹಿನ್ನಲೆ ಪೊಲೀಸರೇ ಬಾಬು ದೊಡ್ಡಮನಿ ಅವರನ್ನು ಜೀಪಿನಲ್ಲಿ ಕೂರಿಸಿಕೊಂಡು ಬೀದರ್ ಕಡೆ ಹೊರಟರು. ಅಲ್ಲಿನ ಸಬ್ ಅರ್ಬನ್ ಪೊಲೀಸ್ ಠಾಣೆಗೆ ಬಾಬು ದೊಡ್ಡಮನಿ ಅವರನ್ನು ಹಾಜರುಪಡಿಸಿ ಊರಿಗೆ ಮರಳಿದರು.