ಹೊನ್ನಾವರದಿಂದ ಕುಮಟಾಗೆ ಬರುತ್ತಿದ್ದ ಸುಗಮ ಬಸ್ಸಿನ ಸಂಚಾರ ಸುಗಮವಾಗಿಲ್ಲದ ಕಾರಣ KSRTC ಚಾಲಕರೊಬ್ಬರು ಸಾವನಪ್ಪಿದ್ದಾರೆ. ಬಸ್ಸಿನಲ್ಲಿ ಲಗೇಜ್ ಹಾಕುವ ಡಿಕ್ಕಿ ತೆರೆದಿದ್ದರೂ ಅದರ ಬಾಗಿಲು ಮುಚ್ಚದೇ ಬಸ್ಸು ಸಂಚರಿಸಿದ್ದರಿoದ ಆ ಡಿಕ್ಕಿಯ ಬಾಗಿಲು ಬಾಲಚಂದ್ರ ನಾಯ್ಕ ಅವರ ಗಡ್ಡಕ್ಕೆ ಗುದ್ದಿದ್ದು, ಅವರು ಕೊನೆಯುಸಿರೆಳೆದಿದ್ದಾರೆ.
ಹೊನ್ನಾವರ ಹಳದಿಪುರದ ಕಿರಬೈಲಿನಲ್ಲಿ ಬಾಲಚಂದ್ರ ಗಜಾನನ ನಾಯ್ಕ (43) ಅವರು ವಾಸವಾಗಿದ್ದರು. ಕೆಎಸ್‌ಆರ್‌ಟಿಸಿಯಲ್ಲಿ ಅವರು ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದರು. ಬಸ್ಸಿನ ಚಾಲಕರಾಗಿದ್ದ ಬಾಲಚಂದ್ರ ನಾಯ್ಕ ಅವರು ಸುರಕ್ಷಿತ ಚಾಲನೆಗೆ ಪ್ರಸಿದ್ಧಿಪಡೆದಿದ್ದು, ಸುಗಮ ಬಸ್ಸಿನ ಚಾಲಕನ ಅವಾಂತರದಿAದಾಗಿ ಅವರು ತಮ್ಮ ಬದುಕು ಕಳೆದುಕೊಂಡರು. ಹೊನ್ನಾವರದಿಂದ ಕುಮಟಾ ಕಡೆ ಬರುತ್ತಿದ್ದ ಸುಗಮ ಬಸ್ಸನ್ನು ಸಿದ್ದಾಪುರದ ಮಾವಿನಗುಂಡಿಯ ರಾಮಚಂದ್ರ ಮಾಳಪ್ಪ ನಾಯ್ಕ ಅವರು ಓಡಿಸುತ್ತಿದ್ದು, ತಮ್ಮ ಹಾಗೇ ಚಾಲಕನಾಗಿ ದುಡಿಯುತ್ತಿದ್ದ ಬಾಲಚಂದ್ರ ನಾಯ್ಕ ಅವರ ಬದುಕನ್ನು ಅವರು ಕಿತ್ತುಕೊಂಡರು.
ಜೂನ್ 12ರ ರಾತ್ರಿ ಸುಗಮ ಬಸ್ಸಿನ ಎಡಬದಿ ಲಗೇಜ್ ಹಾಕುವ ಡಿಕ್ಕಿ ತೆರೆದಿದ್ದರೂ ಆ ಬಸ್ಸು ಸಂಚಾರ ನಡೆಸಿತ್ತು. ಕುಮಟಾ ಹಳೆ ಬಸ್ ನಿಲ್ದಾಣದಿಂದ ಬಾಲಚಂದ್ರ ನಾಯ್ಕ ಅವರು ಸ್ಕೂಟಿಯಲ್ಲಿ ಹೊರಟಿದ್ದರು. ಮಾಸ್ತಿಕಟ್ಟೆ ಪೆಟ್ರೊಲ್ ಬಂಕ್ ಬಳಿಯಿಂದ ಸನ್ಮಾನ ಹೊಟೇಲ್ ಕಡೆ ಹೋಗುವಾಗ ಆ ಬಸ್ಸಿನ ಡಿಕ್ಕಿ ಬಾಗಿಲು ಬಾಲಚಂದ್ರ ನಾಯ್ಕ ಅವರಿಗೆ ತಾಗಿತು. ಪರಿಣಾಮ ಬಾಲಚಂದ್ರ ನಾಯ್ಕ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಯೇ ಸಾವನಪ್ಪಿದರು. ಸಹೋದರನ ಸಾವಿನ ಬಗ್ಗೆ ನಿವೃತ್ತ ಸೈನಿಕ ಗಿರೀಶ ಗಜಾನನ ನಾಯ್ಕ ಅವರು ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದರು.