ಅಕ್ರಮಗಳನ್ನು ತಡೆಯುವುದು ಆಡಳಿತದಲ್ಲಿರುವವರ ಕರ್ತವ್ಯ. ಆದರೆ, ಶಿರಸಿ-ಸಿದ್ದಾಪುರದಲ್ಲಿ ಅಕ್ರಮ ತಡೆಗೂ ಮನವಿ ಸಲ್ಲಿಸುವ ಅನಿವಾರ್ಯ ಸೃಷ್ಠಿಯಾಗಿದೆ. ಇದನ್ನು ಅರಿತ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಅವರು ಶಿರಸಿ-ಸಿದ್ದಾಪುರ ಭಾಗದಲ್ಲಿ ಅಕ್ರಮ ಸರಾಯಿ, ಗಾಂಜಾ ಮಾರಾಟ ಹಾಗೂ ಮಟ್ಕಾ ಹಾವಳಿ ತಡೆಯುವಂತೆ ಆಗ್ರಹಿಸಿ ಹೊಸ ಹೋರಾಟಕ್ಕೆ ಅಣಿಯಾಗಿದ್ದಾರೆ. `ಎಲ್ಲಾ ಬಗೆಯ ಅಕ್ರಮ ಚಟುವಟಿಕೆ ನಿಲ್ಲಿಸಬೇಕು’ ಎಂದು ಆಗ್ರಹಿಸಿ ಅವರು ಹೊಸ ಹೋರಾಟ ಶುರು ಮಾಡಿದ್ದಾರೆ.
`ಶಿರಸಿ – ಸಿದ್ದಾಪುರ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆದಿದ್ದು, ಅದನ್ನು ಕುಡಿದ ರೈತರು ಹಾಗೂ ಕೂಲಿ ಕಾರ್ಮಿಕರ ಕಿಡ್ನಿ-ಲಿವರ್ ಹಾಳಾಗಿದೆ. ಈಗಾಗಲೇ ಅನೇಕರು ಅಕ್ರಮ ಮದ್ಯ ಸೇವನೆಯಿಂದ ಸಾವನಪ್ಪಿದ್ದಾರೆ. `ಈಚೆಗಂತೂ ಗಾಂಜಾ ಹಾಗೂ ಡ್ರಗ್ಸ್ ಸೇವನೆ ಹೆಚ್ಚಾಗಿದ್ದು, ಇದನ್ನು ಪೂರೈಸುವವರು ಯಾರು? ಎನ್ನುವ ಬಗ್ಗೆ ತನಿಖೆಯಾಗಿಲ್ಲ. ಇದಕ್ಕಾಗಿ ಈ ಹೋರಾಟ ಅನಿವಾರ್ಯ’ ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. `ಈ ಅಕ್ರಮ ದಂಧೆಗಳಿAದ ಬಡವರು, ಕೂಲಿ ಕಾರ್ಮಿಕರು ನಿರ್ಗತಿಕರಾಗುತ್ತಿದ್ದಾರೆ. ಶಾಲಾ-ಕಾಲೇಜು ಬಳಿ ಗಾಂಜಾ ಹಾಗೂ ಸರಾಯಿ ಮಾರಾಟದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ’ ಎಂದವರು ಕಳವಳವ್ಯಕ್ತಪಡಿಸಿದ್ದಾರೆ.
`ಬಹುತೇಕ ಶಾಲೆ ಹಾಗೂ ಕಾಲೇಜಿನ ಸಮೀಪದಲ್ಲಿ ಡ್ರಗ್ಸ್ ಹಾಗೂ ಗಾಂಜಾ ಹಾವಳಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಅನೈತಿಕ ವ್ಯವಹಾರಗಳಿಗೆ ಕಡಿವಾಣ ಬೀಳಬೇಕಿದೆ. ಇದಕ್ಕಾಗಿ ಸಾರ್ವಜನಿಕ ಸಹಕಾರವೂ ಅಗತ್ಯವಿದೆ. ಜೂನ್ 16ರಂದು ಬೆಳಗ್ಗೆ 11 ಗಂಟೆಗೆ ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಕ್ರಮಗಳ ಕಡಿವಾಣಕ್ಕೆ ಒತ್ತಾಯ ಮಾಡಲು ನಿರ್ಧರಿಸಲಾಗಿದೆ’ ಎಂದವರು ವಿವರಿಸಿದ್ದಾರೆ.