ಕುಮಟಾ ಮೂರುರು ಗುಡ್ಡದ ಮೇಲೆ ಗಾಂಜಾ ಸೇವಿಸಿ ಅಲೆದಾಡುವವರ ಸಂಖ್ಯೆ ಹೆಚ್ಚಾಗಿದೆ. ಮಿರ್ಜಾನಿನ ದೀಪಕ ಮುಕ್ರಿ ಹಾಗೂ ಮಾಸೂರಿನ ದನಂಜಯ ಪಟಗಾರ ಸಹ ಅಲ್ಲಿ ಮಾದಕ ವ್ಯಸನ ಸೇವಿಸಿದ್ದಾರೆ. ಚಾಲಕರಾಗಿರುವ ಅವರಿಬ್ಬರು ಸಣ್ಣ ವಯಸ್ಸಿನಲ್ಲಿಯೇ ದುಶ್ಚಟದ ದಾರಿ ಹಿಡಿದಿದ್ದಾರೆ.
ಕುಮಟಾ ಮಿರ್ಜಾನ್ ಬಳಿಯ ಖೈರೇ ಕ್ರಾಸಿನ ಬಳಿ ದೀಪಕ ಶ್ರೀಧರ ಮುಕ್ರಿ ಅವರು ವಾಸವಾಗಿದ್ದಾರೆ. 26 ವರ್ಷದ ಅವರು ದುಡಿದ ಹಣವನ್ನು ದುಶ್ಚಟಕ್ಕೆ ಬಳಸುತ್ತಿದ್ದಾರೆ. ಮಾಸೂರಿನ ದನಂಜಯ ಬೊಬ್ಬು ಪಟಗಾರ ಅವರು ಸಹ 30 ವರ್ಷದವರಾಗಿದ್ದು, ಅವರು ಸಹ ದುಶ್ಚಟದ ದಾಸರಾಗಿದ್ದಾರೆ. ದೀಪಕ ಮುಕ್ರಿ ಹಾಗೂ ದನಂಜಯ ಪಟಗಾರ ಇಬ್ಬರೂ ಚಾಲಕರಾಗಿದ್ದು, ಜೂನ್ 13ರಂದು ಮೂರುರು ಗುಡ್ಡ ಏರಿ ನಿಷೇಧಿತ ಗಾಂಜಾ ಸೇವನೆ ಮಾಡಿದ್ದಾರೆ.
ಮಧ್ಯಾಹ್ನ 1 ಗಂಟೆಯ ಬಿಸಿಲಿನಲ್ಲಿಯೂ ಅವರಿಬ್ಬರು ಗುಡ್ಡದ ಮೇಲೆ ಅಲೆದಾಡುತ್ತಿರುವುದನ್ನು ಜನ ನೋಡಿದ್ದಾರೆ. ಅವರಿಬ್ಬರ ಅನುಮಾನಾಸ್ಪದ ವರ್ತನೆಯ ಬಗ್ಗೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಫೋನ್ ಮಾಡಿದ್ದಾರೆ. ನಶೆಯ ಗುಂಗಿನಲ್ಲಿ ಅವರಿಬ್ಬರು ಸುಂದರ ಗುಡ್ಡವನ್ನು ಹಾಳು ಮಾಡುತ್ತಿರುವ ಬಗ್ಗೆ ದೂರಿದ್ದಾರೆ. ಪಿಸೈ ಸಾವಿತ್ರಿ ನಾಯಕ ಹಾಗೂ ಖಾದರ್ ಭಾಷಾ ಅಲ್ಲಿ ದೌಡಾಯಿಸಿದ್ದು, ಆ ಇಬ್ಬರು ಚಾಲಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ದೀಪಕ ಮುಕ್ರಿ ಹಾಗೂ ದನಂಜಯ ಪಟಗಾರ ವಿಪರೀತ ಪ್ರಮಾಣದಲ್ಲಿ ಗಾಂಜಾ ಸೇವಿಸಿದ್ದು, ಅವರಿಂದ ಮಾತನಾಡಲು ಸಹ ಸಾಧ್ಯವಾಗಿಲ್ಲ. ನಶೆಯ ಗುಂಗಿನಲ್ಲಿದ್ದ ಅವರಿಬ್ಬರನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ನೀಡಿದ ವರದಿಯಲ್ಲಿ ಅವರ ಗಾಂಜಾ ಸೇವನೆ ದೃಢವಾಗಿದ್ದು, ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.