ಯಲ್ಲಾಪುರದ ಇಡಗುಂದಿಯಲ್ಲಿ ಬಾಳೆಕಾಯಿ ಅಂಗಡಿ ಮಾಡಿಕೊಂಡಿರುವ ಅನಂತ ಗಟ್ಟಿ ಅವರಿಗೆ ಹುಟಕಮನೆಯ ಸುಬ್ರಹ್ಮಣ್ಯ ಸಿದ್ದಿ ಅವರು ಬೈಕ್ ಗುದ್ದಿದ್ದಾರೆ. ಕಾಲಿಗೆ ಪೆಟ್ಟಾಗಿರುವ ಕಾರಣ ಅನಂತ ಗಟ್ಟಿ ಅವರು ಆಸ್ಪತ್ರೆ ಸೇರಿದ್ದಾರೆ.
ಯಲ್ಲಾಪುರದ ಇಡಗುಂದಿಯಲ್ಲಿ ಅನಂತ ಮಹಾಬಳೇಶ್ವರ ಗಟ್ಟಿ ಅವರು ಬಾಳೆಕಾಯಿ ಅಂಗಡಿ ಹೊಂದಿದ್ದಾರೆ. ಜೂನ್ 12ರ ರಾತ್ರಿ 9.30ಕ್ಕೆ ಅವರು ಅಂಗಡಿಯಿAದ ಹೊರ ಬಿದ್ದಿದ್ದು, ಕಿರಾಣಿ ಸಾಮಗ್ರಿ ತರುವುದಕ್ಕಾಗಿ ಹೆದ್ದಾರಿ ದಾಟುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಹುಟಕಮನೆಯ ಸುಬ್ರಹ್ಮಣ್ಯ ಬಾಬು ಸಿದ್ದಿ ಅವರು ಜೋರಾಗಿ ಬೈಕ್ ಓಡಿಸಿಕೊಂಡು ಬಂದಿದ್ದು, ಆ ಬೈಕನ್ನು ಅನಂತ ಗಟ್ಟಿ ಅವರಿಗೆ ಗುದ್ದಿದ್ದಾರೆ.
ಈ ಅಪಘಾತದಲ್ಲಿ ಬೈಕ್ ಓಡಿಸುತ್ತಿದ್ದ ಸುಬ್ರಹ್ಮಣ್ಯ ಸಿದ್ದಿ ಅವರ ಜೊತೆ ಆ ಬೈಕಿನ ಹಿಂದೆ ಕೂತಿದ್ದ ವಿಷ್ಣು ಸುಬ್ಬಾ ಸಿದ್ದಿ ಅವರು ಹಾರಿ ಬಿದ್ದಿದ್ದಾರೆ. ಅಪಘಾತದಲ್ಲಿ ಅನಂತ ಗಟ್ಟಿ ಅವರ ಕಾಲಿಗೆ ಪೆಟ್ಟಾಗಿದೆ. ಬಾಳೆಕಾಯಿ ಅಂಗಡಿ ಬಳಿ ನಿಂತಿದ್ದ ದೋಣಗಾರದ ಮಹಾಬಳೇಶ್ವರ ವೆಂಕಟ್ರಮಣ ಗಟ್ಟಿ ಅವರು ಅಪಘಾತದ ಪ್ರತ್ಯಕ್ಷದರ್ಶಿಯಾಗಿದ್ದಾರೆ. `ಹೆದ್ದಾರಿ ಅಂಚಿನಲ್ಲಿ ನಿಂತಿದ್ದ ತನ್ನ ಚಿಕ್ಕಪ್ಪನಿಗೆ ವೇಗವಾಗಿ ಬಂದ ಬೈಕು ಗುದ್ದಿದೆ’ ಎಂದು ಮಹಾಬಳೇಶ್ವರ ಗಟ್ಟಿ ಅವರು ಹೇಳಿದ್ದಾರೆ.