ಹೊನ್ನಾವರದ ದೇವಸ್ಥಾನಕೇರಿಯ ಪಾರ್ವತಿ ಪಟಗಾರ ಅವರ ಮನೆಯಲ್ಲಿ ಕಳ್ಳತನ ಮಾಡಿದ ಧನುಶ್ ಗೌಡ ಅವರು ಅಲ್ಲಿ ಕದ್ದ ಚಿನ್ನಾಭರಣಗಳನ್ನು ತಮ್ಮ ಸ್ನೇಹಿತ ಗೌರೀಶ ಗೌಡ ಅವರಿಗೆ ನೀಡಿದ್ದಾರೆ. ಗೌರೀಶ ಗೌಡ ಅವರು ಸದ್ಯ ಆ ಎಲ್ಲಾ ಚಿನ್ನವನ್ನು ಮಣಿಪುರಂ ಫೈನಾನ್ಸ್ ಹಾಗೂ ಮುತುಡ್ ಫೈನಾನ್ಸಿನಲ್ಲಿ ಅಡವಿಟ್ಟಿದ್ದು, ಫೈನಾನ್ಸ್ ಕಂಪನಿಯಲ್ಲಿದ್ದ ಚಿನ್ನಾಭರಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಹೊನ್ನಾವರದ ದೇವಸ್ಥಾನಕೇರಿಯಲ್ಲಿ ಪಾರ್ವತಿ ನಾರಾಯಣ ಪಟಗಾರ ಅವರು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದು, ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಜೂನ್ 7ರಂದು ಕಳ್ಳತನ ನಡೆದಿರುವುದು ಪಾರ್ವತಿ ಪಟಗಾರ ಅವರ ಗಮನಕ್ಕೆ ಬಂದಿತ್ತು. ಅದೇ ಊರಿನ 40 ಗ್ರಾಂ ತೂಕದ ಮಂಗಳಸೂತ್ರ, 15 ಗ್ರಾಂ ತೂಕದ ಕರಿಮಣಿ ಮಂಗಳಸೂತ್ರ, 20 ಗ್ರಾಂ ತೂಕದ ನೆಕ್ಲೇಸ್, 35 ಗ್ರಾಂ ತೂಕದ ಹವಳದ ಸರ, ಎರಡು ಮಕ್ಕಳ ಚೈನುಗಳು, ಐದು ಚಿಕ್ಕ ಉಂಗುರ ಸೇರಿ 128 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ್ದರು. ಅದೇ ಊರಿನ ಧನುಶ್ ಶ್ರೀಧರ ಗೌಡ ಅವರ ಮೇಲೆ ಪಾರ್ವತಿ ಪಟಗಾರ ಅವರು ಅನುಮಾನವ್ಯಕ್ತಪಡಿಸಿದ್ದರು.
ಅದರಂತೆ, ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ತನಿಖೆ ಶುರು ಮಾಡಿದರು. ಎಂದಿನAತೆ, ತನಿಖೆಗಿಳಿದ ಹೊನ್ನಾವರ ಪಿಐ ಸಿದ್ದರಾಮೇಶ್ವರ, ಪಿಸೈ ಮಹಂತೇಶ ವಾಲ್ಮೀಕಿ, ಸಂಗೀತಾ ಹಾಗೂ ರೇಣುಕಾ ಅವರಿಗೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಮಾರ್ಗದರ್ಶನ ಮಾಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಅವರು ಈ ಪ್ರಕರಣದಲ್ಲಿ ವಿವಿಧ ಮಾಹಿತಿ ಕಲೆ ಹಾಕಿದ್ದು, ಡಿವೈಎಸ್ಪಿ ಗಿರೀಶ್ ಬಿ ಅವರಿಗೆ ಸೂಚಿಸಿ ಪೊಲೀಸ್ ಸಿಬ್ಬಂದಿ ಗಜಾನನ ನಾಯಕ, ಮನೋಜ ಡಿ, ರವಿ ನಾಯ್ಕ ಹಾಗೂ ಸಚಿನ್ ನಾಯ್ಕ ಅವರನ್ನು ತನಿಖಾ ತಂಡಕ್ಕೆ ಸೇರಿಸಿದರು. ಈ ಪೊಲೀಸರೆಲ್ಲರೂ ಸೇರಿ ಪರಾರಿಯಾಗಿದ್ದ ಧನುಶ್ ಗೌಡ ಅವರನ್ನು ಹುಡುಕಿದರು.
ಈ ವೇಳೆ ಹೊನ್ನಾವರ ಗೇರುಸೊಪ್ಪ ಬಳಿಯ ಮೆಟ್ಟಿನಗದ್ದೆಯ ಗೌರೀಶ ಗಣಪತಿ ಗೌಡ ಅವರು ಕದ್ದ ಆಭರಣಗಳನ್ನು ಸ್ವೀಕರಿಸಿರುವುದು ಗೊತ್ತಾಯಿತು. ಆಭರಣ ವಿಲೇವಾರಿಗಾಗಿ ಗೌರೀಶ ಗೌಡ ಅವರು ಕಸರತ್ತು ನಡೆಸಿದ್ದು, ಈ ವಿಷಯ ಅರಿತ ಪೊಲೀಸರು ಗೌರೀಶ ಗೌಡ ಅವರ ಬೆನ್ನತ್ತಿದರು. ಪೊಲೀಸರನ್ನು ಕಂಡ ತಕ್ಷಣ ಗೌರೀಶ ಗೌಡ ಅವರು ತಪ್ಪನ್ನು ಒಪ್ಪಿಕೊಂಡಿದ್ದು, ಅದನ್ನು ಮಣಿಪುರಂ ಫೈನಾನ್ಸ್ ಹಾಗೂ ಮುತುಡ್ ಫೈನಾನ್ಸಿನಲ್ಲಿಟ್ಟಿರುವ ಬಗ್ಗೆ ತಿಳಿಸಿದರು. ಪೊಲೀಸರು ಅಲ್ಲಿಗೆ ಹೋಗಿ 17 ಲಕ್ಷಕ್ಕೂ ಅಧಿಕ ರೂ ಮೌಲ್ಯದ ಚಿನ್ನಾಭರಣವನ್ನು ಜಪ್ತು ಮಾಡಿದರು. ಗೌರೀಶ ಗೌಡ ಹಾಗೂ ಧನುಷ್ ಗೌಡ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು.