ಉತ್ತರ ಕನ್ನಡ ಸೇರಿ ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆ ಮಾಡಲು ಟಾಟಾ ಕಂಪನಿ ಆಸಕ್ತಿವಹಿಸಿದೆ. ವಿದ್ಯುತ್ ವಿತರಣೆ ಕಾರ್ಯವನ್ನು ಈ ಕಂಪನಿಗೆವಹಿಸಲು ನಿಗಮವೂ ಆಸಕ್ತಿವಹಿಸಿದ್ದು, ಇದಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ತೀವೃ ವಿರೋಧವ್ಯಕ್ತಪಡಿಸಿದೆ.
`ವಿದ್ಯುತ್ ಖಾಸಗೀಕರಣವಾದರೆ ಸರಕಾರದಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಲ್ಯಾಣ ಯೋಜನೆಗಳಿಗೆ ಸಮಸ್ಯೆ ಆಗಲಿದೆ. ರೈತರ ಪಂಪ್‌ಸೆಟ್ಟುಗಳಿಗೆ ದೊರೆಯುವ ಉಚಿತ ವಿದ್ಯುತ್ ಬಂದಾಗಲಿದೆ. ಜೊತೆಗೆ ವಿದ್ಯುತ್ ದರ ಏರಿಕೆಯಿಂದ ಗ್ರಾಹಕರಿಗೂ ಆರ್ಥಿಕ ಹೊರೆಯಾಗಲಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅವರು ಕಳವಳವ್ಯಕ್ತಪಡಿಸಿದ್ದಾರೆ. `ರೈತರ ಹಿತದೃಷ್ಠಿಯಿಂದ ವಿದ್ಯುತ್ ಖಾಸಗೀಕರಣ ಅಪಾಯಕಾರಿಯಾಗಿದ್ದು, ಟಾಟಾ ಕಂಪನಿಯ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯಿಂದ ಅವರು ಒತ್ತಾಯಿಸಿದ್ದಾರೆ.
`ದೇಶದಲ್ಲೇ ಅತ್ಯಂತ ಹೆಚ್ಚು ಕೃಷಿ ಹವಾಮಾನ ವೈವಿಧ್ಯಕ್ಕೆ ಕರ್ನಾಟಕ ಹೆಸರುವಾಸಿಯಾಗಿದೆ. ಇಲ್ಲಿ 40 ಲಕ್ಷಕ್ಕೂ ಹೆಚ್ಚು ನೀರಾವರಿ ಪಂಪ್ ಸೆಟ್ ಬಳಕೆಯಲ್ಲಿದೆ. ಖಾಸಗೀಕರಣ ಹಾಗೂ ಸ್ಮಾರ್ಟ ಮೀಟರ್ ಅಳವಡಿಕೆಯಿಂದ ರೈತರಿಗೆ ಸಮಸ್ಯೆ ಆಗಲಿದೆ. ಇದರಿಂದ ಕೃಷಿ ಕ್ಷೇತ್ರ ಕುಂಟಿತವಾಗಲಿದ್ದು, ಆಹಾರ ಭದ್ರತೆ ಸಮಸ್ಯೆ ಸಾಧ್ಯತೆಯಿದೆ’ ಎಂದು ಶಾಂತರಾಮ ನಾಯಕ ಅವರು ಹೇಳಿದ್ದಾರೆ. ಜೊತೆಗೆ `ನೌಕರರ ಉದ್ಯೋಗ ಭದ್ರತೆಗೆ ಸಹ ಖಾಸಗಿ ಕಂಪನಿಯಿAದ ಸಮಸ್ಯೆಯಾಗಲಿದೆ’ ಎಂದು ವಿವರಿಸಿದ್ದಾರೆ. ಈ ಎಲ್ಲಾ ವಿಷಯ ವಿವರಿಸಿ ಅವರು ಆಕ್ಷೇಪಣಾ ಪತ್ರವನ್ನು ಸಲ್ಲಿಸಿದ್ದಾರೆ. ಸಮಿತಿಯ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಹೊನ್ನಾವರ, ಅಂಕೋಲಾ ತಾಲೂಕು ಅಧ್ಯಕ್ಷ ಗೌರೀಶ ನಾಯಕ, ಜಂಟಿ ಕಾರ್ಯದರ್ಶಿ ಉದಯ ನಾಯ್ಕ ಹೊಸಗದ್ದೆ, ರಮೇಶ್ ಗೌಡ ಇತರರು ಸಹ ಆಕ್ಷೇಪಣಾ ಪತ್ರಕ್ಕೆ ಸಹಿ ಮಾಡಿದ್ದಾರೆ.