ಯುವ ಸಮುದಾಯದವರಿಗೆ ಮಾದಕ ವ್ಯಸನ ಸರಬರಾಜು ಮಾಡಿ ಅವರ ಬದುಕು ಹಾಳು ಮಾಡುತ್ತಿದ್ದ ಕಾರವಾರದ ಇಬ್ರಾಹಿಂ ದವಳಸಾಬ್ ಅವರನ್ನು ಪೊಲೀಸರು ಬಂಧಿಸಿ, ಬಳ್ಳಾರಿ ಜೈಲಿಗೆ ಹಾಕಿದ್ದಾರೆ. ಮಾದಕ ವಸ್ತು ಸೇವನೆ, ಸಾಗಾಟ ಹಾಗೂ ಸರಬರಾಜು ವೇಳೆ ಸಿಕ್ಕಿಬಿದ್ದ ಇಬ್ರಾಹಿಂ ದವಳಸಾಬ್ ಅವರಿಗೆ ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದರೂ ಪ್ರಯೋಜನವಾಗದ ಹಿನ್ನಲೆ ಇನ್ನಷ್ಟು ಕಠಿಣ ಕ್ರಮ ಜರುಗಿಸಿದ್ದಾರೆ.
ಕಾರವಾರದ ಹಬ್ಬುವಾಡ ಬಳಿಯ ಕುಂಠಿ ಮಹಾಮಾಯಾ ದೇಗುಲದ ಬಳಿ ಇಬ್ರಾಹಿಂ ದವಳಸಾಬ ಚೋಪದಾರ್ ಅವರು ವಾಸವಾಗಿದ್ದಾರೆ. 22 ವರ್ಷದ ಅವರು ಮಾದಕ ವಸ್ತುಗಳ ಪೂರೈಕೆಯನ್ನೇ ಉದ್ದಿಮೆಯನ್ನಾಗಿಸಿಕೊಂಡಿದ್ದು, ಮಾದಕ ವ್ಯಸನ ಮಾರಾಟ ಮಾಡಿ ಅನೇಕರ ಬದುಕು ಹಾಳು ಮಾಡಿದ್ದಾರೆ. ಇಬ್ರಾಹಿಂ ಚೋಪದಾರ್ ಅವರ ವಿರುದ್ಧ ಸಾಕಷ್ಟು ಪೊಲೀಸ್ ಪ್ರಕರಣಗಳು ದಾಖಲಾಗಿವೆ. ಆದರೂ, ಅವರು ಮಾದಕ ವಸ್ತುಗಳ ಸಾಗಾಣಿಕೆ ಕೆಲಸವನ್ನು ಮಾತ್ರ ಬಿಟ್ಟಿಲ್ಲ.
ಇಬ್ರಾಹಿಂ ದವಳಸಾಬ ಚೋಪದಾರ್ ಅವರು ಕಾರವಾರದಲ್ಲಿಯೇ ಇದ್ದರೆ ಇನ್ನಷ್ಟು ಕುಟುಂಬ ಹಾಳಾಗಲಿದೆ ಎಂಬ ಕಾರಣಕ್ಕೆ ಪೊಲೀಸರು ಅವರನ್ನು ಬೇರೆಡೆ ಸ್ಥಳಾಂತರಿಸುವ ಪ್ರಯತ್ನ ಮಾಡಿದ್ದಾರೆ. ಅದರ ಭಾಗವಾಗಿ ಬಳ್ಳಾರಿ ಜೈಲಿಗೆ ಕಳುಹಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಅದಕ್ಕೆ ಸಮ್ಮತಿ ನೀಡಿದ್ದಾರೆ. ಹೀಗಾಗಿ ಇಬ್ರಾಹಿಂ ದವಳಸಾಬ ಚೋಪದಾರ್ ಅವರನ್ನು ಪೊಲೀಸರು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಬಿಟ್ಟು ಬಂದಿದ್ದಾರೆ.