ಬೈಕ್ ಸ್ಕಿಡ್ ಆಗಿದ್ದರಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಾರವಾರದ ಚಿತ್ತಾಕುಲದ ರಕ್ಷಿತ್ ಹರಿಕಂತ್ರ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆದರೂ ಅದು ಪ್ರಯೋಜನಕ್ಕೆ ಬರಲಿಲ್ಲ.
ಕಾರವಾರದ ಚಿತ್ತಾಕುಲ ಸೀಬರ್ಡ ಕಾಲೋನಿಯಲ್ಲಿ ರಕ್ಷಿತ್ ಗಣಪತಿ ಹರಿಕಂತ್ರ ಅವರು ವಾಸವಾಗಿದ್ದರು. 27 ವರ್ಷದ ಅವರು ಜೂನ್ 15ರ ರಾತ್ರಿ 11.45ಕ್ಕೆ ಕಾರವಾರದಿಂದ ಚಿತ್ತಾಕುಲ ಕಡೆ ಹೊರಟಿದ್ದರು. ಅವರು ಓಡಿಸುತ್ತಿದ್ದ ಬೈಕಿನ ವೇಗ ಜಾಸ್ತಿಯಾಗಿದ್ದು, ಸದಾಶಿವಗಡದ ಲೂಟೋಸ್ ಹೊಟೋಲ್ ಎದುರು ಆ ಬೈಕ್ ಸ್ಕಿಡ್ ಆಯಿತು. ಬೈಕಿನಿಂದ ಬಿದ್ದ ರಕ್ಷಿತ್ ಹರಿಕಂತ್ರ ಅವರು ಗಂಭೀರವಾಗಿ ಗಾಯಗೊಂಡರು.
ತಕ್ಷಣ ರಕ್ಷಿತ ಹರಿಕಂತ್ರ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬಾಂಬೋಲಿಯA ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಎರಡು ಆಸ್ಪತ್ರೆಯ ವೈದ್ಯರು ರಕ್ಷಿತ ಹರಿಕಂತ್ರ ಅವರ ಜೀವ ಉಳಿಸಲು ಸಾಕಷ್ಟು ಶ್ರಮಿಸಿದರು. ಆದರೆ, ಜೂನ್ 16ರಂದು ರಕ್ಷಿತ್ ಹರಿಕಂತ್ರ ಅವರು ಉಸಿರಾಟ ನಿಲ್ಲಿಸಿದರು. ಮಗನ ಸಾವಿನ ಬಗ್ಗೆ ಗಣಪತಿ ಗಾರು ಹರಿಕಂತ್ರ ಅವರು ಚಿತ್ತಾಕುಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.