ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 21ರಿಂದ ಜುಲೈ 11ರವರೆಗೆ ದಶಲಕ್ಷ ಗಿಡ ನೆಡುವ ಅಭಿಯಾನ ನಡೆಯಲಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಈ ಅಭಿಯಾನವನ್ನು ಆಯೋಜಿಸಿದ್ದು, 21 ದಿನಗಳ ಕಾಲ ಆಂದೋಲನ ಮಾದರಿಯಲ್ಲಿ ಈ ಕಾರ್ಯ ನಡೆಯಲಿದೆ.
`ಕಳೆದ ಒಂದು ದಶಕದಿಂದ ಪರಿಸರ ಜಾಗೃತೆ ವಿಷಯವಾಗಿ ಗಿಡ ನೆಡುವ ಕಾರ್ಯ ನಡೆಯುತ್ತಿದ್ದು, ಈ ಬಾರಿಯೂ ಅದನ್ನು ಮುಂದುವರೆಸಲಾಗುತ್ತದೆ’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. ಇದಕ್ಕಾಗಿ ಆಯ್ದ ಸ್ಥಳಗಳಿಂದ ಲಕ್ಷಾಂತರ ಗಿಡಗಳನ್ನು ಸಂಗ್ರಹಿಸಲಾಗಿದೆ. ಅಭಿಯಾನದ ಯೋಜನೆಯಂತೆ ನೂರಕ್ಕೂ ಮಿಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿ ಹಳ್ಳಿಗಳಲ್ಲಿ ಹಬ್ಬದ ರೀತಿ ಗಿಡ ನಾಟಿ ನಡೆಯಲಿದೆ. ಅರಣ್ಯವಾಸಿಗಳು ಗಿಡ ನೆಡುವ ಅಭಿಯಾನದ ರೂವಾರಿಗಳಾಗಿದ್ದಾರೆ’ ಎಂದವರು ವಿವರಿಸಿದ್ದಾರೆ.
`ಜೀವನಕ್ಕಾಗಿ ಅರಣ್ಯ ಭೂಮಿಯಲ್ಲಿ ಜೀವಿಸಿದ ಅರಣ್ಯವಾಸಿಗಳು ಅರಣ್ಯಸಾಂದ್ರತೆ ಹೆಚ್ಚಿಸುವ ಮನೋಭಾವನೆ ವೃದ್ಧಿಸುವ ಉದ್ದೇಶದಿಂದ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಗಿಡ ನೆಡುವ ಅಭಿಯಾನದಲ್ಲಿ ದೀರ್ಘಕಾಲದ ಗಿಡಗಳ ಜೊತೆಯಲ್ಲಿ ಹಣ್ಣು ಹಂಪಲ ಗಿಡ ನೆಡಲಾಗುತ್ತದೆ’ ಎಂದವರು ತಿಳಿಸಿದ್ದಾರೆ.