ಕಳ್ಳತನ, ಜೀವ ಬೆದರಿಕೆ ಸೇರಿ ಏಳು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಸುನೀಲ ಭೋವಿವಡ್ಡರ್ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದ್ದು, ಪೊಲೀಸರು ಯಾದಗಿರಿಗೆ ಬಿಟ್ಟು ಬಂದ ಮರುದಿನವೇ ಅವರು ಊರಿಗೆ ಮರಳಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸದಂತೆ ಎಚ್ಚರಿಕೆ ನೀಡಿದರೂ ಅದನ್ನು ಉಲ್ಲಂಘಿಸಿ ಸುನೀಲ ಭೋವಿವಡ್ಡರ್ ಅವರು ಕದ್ದುಮುಚ್ಚಿ ಓಡಾಟ ಮಾಡುತ್ತಿದ್ದಾರೆ.
ಶಿರಸಿಯ ಬನವಾಸಿ ಬಳಿಯ ಬದನಗೋಡದಲ್ಲಿ ಸುನೀಲ ಚಂದ್ರಪ್ಪ ಬೋವಿವಡ್ಡರ್ (ಸ್ವಾಮಿಲ್ಲಾ) ಅವರು ವಾಸವಾಗಿದ್ದರು. ಕಳ್ಳತನ, ಸಾಕ್ಷಿಗಳಿಗೆ ಹೆದರಿಸುವಿಕೆ, ಜೀವ ಬೆದರಿಕೆ ಸೇರಿ ಅವರ ವಿರುದ್ಧ ಏಳು ಪೊಲೀಸ್ ಪ್ರಕರಣಗಳು ದಾಖಲಾಗಿದ್ದವು. ತಮ್ಮೊಂದಿಗೆ ಇತರರಿಗೂ ಅವರು ಅಪರಾಧ ಕೃತ್ಯದಲ್ಲಿ ಭಾಗಿಯಾಗಲು ಪ್ರೇರೇಪಿಸುತ್ತಿದ್ದು, ಅದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಪದೇ ಪದೇ ಶಾಂತಿ-ಸುವ್ಯವಸ್ಥೆ ಹಾಳು ಮಾಡುತ್ತಿದ್ದ ಕಾರಣ ಸುನೀಲ ಚಂದ್ರಪ್ಪ ಬೋವಿವಡ್ಡರ್ ಅವರನ್ನು ಗಡಿಪಾರು ಮಾಡುವಂತೆ ಬನವಾಸಿ ಪೊಲೀಸರು ಮೇಲಧಿಕಾರಿಗಳಿಗೆ ಮನವಿ ಮಾಡಿದ್ದರು.
ಶಿರಸಿ ಉಪವಿಭಾಗಾಧಿಕಾರಿಗಳು ಮಾರ್ಚ 16ರಂದು ಸುನೀಲ ಭೋವಿವಡ್ಡರ್ ಅವರನ್ನು ಗಡಿಪಾರು ಮಾಡಿ ಆದೇಶಿಸಿದ್ದರು. ಹೀಗಾಗಿ, ಬನವಾಸಿ ಪೊಲೀಸರು ಅವರನ್ನು ಯಾದಗಿರಿಗೆ ಬಿಟ್ಟು ಬಂದಿದ್ದರು. ಯಾದಗಿರಿ ಪೊಲೀಸ್ ಠಾಣೆಯಲ್ಲಿ ಸಹಿ ಹಾಕಿದ ಸುನೀಲ್ ಬೋವಿವಡ್ಡರ್ ಅವರು ಪೊಲೀಸರ ಬೆನ್ನಿಗೆ ಆ ಊರು ತೊರೆದಿದ್ದರು. ಗಡಿಪಾರು ಮಾಡಿದರೂ ಆ ಆದೇಶ ಉಲ್ಲಂಘಿಸಿ ಸುನೀಲ ಬೋವಿವಡ್ಡರ್ ಓಡಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತು. ಬನವಾಸಿ ಪಿಸೈ ಮಹಂತೇಶ ಕುಂಬಾರ್ ಅವರು ಈ ವಿಷಯ ಖಚಿತಪಡಿಸಿಕೊಂಡಿದ್ದು, ಆದೇಶ ಉಲ್ಲಂಘಿಸಿದ ಕಾರಣ ಸುನೀಲ ಭೋವಿವಡ್ಡರ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದರು.