ಕಾರವಾರದ ಅಸ್ನೋಟಿ ಶಿವಾಜಿ ಮಂದಿರದಲ್ಲಿರುವ ಮಕ್ಕಳಿಗೆ ವಲಯ ಅರಣ್ಯಾಧಿಕಾರಿ ಗಜಾನನ ನಾಯ್ಕ ಅವರು ಜೀವನ ಮೌಲ್ಯಗಳ ಬಗ್ಗೆ ಪಾಠ ಮಾಡಿದ್ದಾರೆ. ನೈತಿಕತೆ, ಸಾಮಾಜಿಕ ಜವಾಬ್ದಾರಿ, ಉತ್ತಮ ನಡತೆ ರೂಪಿಸಿಕೊಳ್ಳುವ ಮೂಲಕ ಯಶಸ್ವಿ ಜೀವನ ನಡೆಸುವುದರ ಬಗ್ಗೆ ಅವರು ಮಕ್ಕಳಿಗೆ ಅರಿವು ಮೂಡಿಸಿದ್ದಾರೆ.
`ಬಾಲ್ಯದಲ್ಲಿಪಡೆದ ಶಿಕ್ಷಣ ಬದುಕಿನುದ್ದಕ್ಕೂ ಸಹಕಾರಿ ಆಗಿರುತ್ತದೆ. ಅದರಲ್ಲಿಯೂ ಮೌಲ್ಯಾಧಾರಿತ ಶಿಕ್ಷಣ ಉತ್ತಮ ಬದುಕು ರೂಪಿಸುತ್ತದೆ’ ಎಂದವರು ಹೇಳಿದ್ದಾರೆ. `ಪ್ರೀತಿ, ವಿಶ್ವಾಸ, ಸಹಬಾಳ್ವೆಯ ಜೊತೆ ಎಲ್ಲಾ ಜೀವಿಗಳ ಬಗ್ಗೆ ಕಾಳಜಿ ಯಶಸ್ಸಿನ ಸೂತ್ರವಾಗಿದೆ. ಪ್ರಾಮಾಣಿಕತೆ ಮತ್ತು ನಿಷ್ಠೆ ನ್ಯಾಯ ಮಾರ್ಗದ ದಾರಿಯಾಗಿದೆ. ಸಹಿಷ್ಣುತೆ, ಸಾಮಾಜಿಕ ನ್ಯಾಯ, ಪರಿಸರ ಜಾಗೃತಿ ಶಾಲೆಯಿಂದಲೇ ಶುರುವಾಗಬೇಕಿದೆ’ ಎಂದವರು ಹೇಳಿದ್ದಾರೆ.
`ಮಕ್ಕಳ ಮೇಲೆ ಒತ್ತಡ ಹೇರದೇ ಕಥೆಗಳ ಮೂಲಕ ಪಾಠ ಮಾಡಬೇಕು. ಸ್ವಯಂ ಅರಿವಿನಿಂದ ಅವರು ಜವಾಬ್ದಾರರಾಗುವ ಹಾಗೇ ನೋಡಿಕೊಳ್ಳಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶಾಲಾ ಮುಖ್ಯಾಧ್ಯಪಕ ಗಣೇಶ ಬಿಷ್ಟಣ್ಣನವರ, ಹಿರಿಯ ಶಿಕ್ಷಕರಾದ ವಿಜಯಕುಮಾರ್ ನಾಯ್ಕ, ಜೆ ಬಿ ತಿಪ್ಪೇಸ್ವಾಮಿ, ರೂಪಾಲಿ ಸಾವಂತ ಅವರು ಸಹ ಅರಣ್ಯಾಧಿಕಾರಿಗಳ ಪಾಠ ಆಲಿಸಿದ್ದಾರೆ.