ಕಾರವಾರದ ಕೆಎಚ್‌ಬಿ ಕಾಲೋನಿಯಲ್ಲಿ ಹೊಸ ಮನೆಯ ಗೃಹ ಪ್ರವೇಶ ಕಾರ್ಯ ನಡೆದಿದ್ದು, ಅದರ ಬೆನ್ನಲ್ಲೆ ಮನೆ ಅಂಗಳದಲ್ಲಿ ಸಾವು ಸಂಭವಿಸಿದೆ. ಗೃಹ ಪ್ರವೇಶದ ವೇಳೆ ಅಳವಡಿಸಿದ್ದ ಪೆಂಡಾಲ್ ತೆಗೆಯಲು ಆಗಮಿಸಿದ್ದ ಭರತ ಗೌಡ ಅವರು ವಿದ್ಯುತ್ ಸ್ಪರ್ಶದಿಂದ ಕೊನೆಯುಸಿರೆಳೆದಿದ್ದಾರೆ.
ಕಾರವಾರದ ಕೆಎಚ್‌ಬಿ ಕಾಲೋನಿಯಲ್ಲಿ ಹೊಸ ಮನೆ ಗೃಹ ಪ್ರವೇಶ ಅದ್ಧೂರಿಯಾಗಿ ನಡೆದಿದ್ದು, ಬೇರೆ ಬೇರೆ ಊರುಗಳಿಂದ ಜನ ಆಗಮಿಸಿದ್ದರು. ಹೊಸ ಮನೆಯ ಮುಂದೆ ಹೊಸ ಹೊಸ ಕಾರುಗಳು ನಿಂತಿದ್ದವು. ಎಲ್ಲರೂ ಸೇರಿ ಉತ್ತಮ ಕಾರ್ಯಕ್ರಮ ನಡೆಸಿದ್ದು, ಕಾರ್ಯಕ್ರಮದ ಕೊನೆ ಘಳಿಗೆಯಲ್ಲಿ ದುರಂತವೊAದು ನಡೆಯಿತು. ಕಾರವಾರದ ನಗರದ ಪದ್ಮನಾಭ ನಗರದ ಯುವಕ ಭರತ್ ಗೌಡ ಅವರು ಪೆಂಡಾಲ್ ಕೆಲಸ ಮಾಡುವ ಕಾರ್ಮಿಕರಾಗಿದ್ದು, ಗೃಹ ಪ್ರವೇಶದ ಸಡಗರದ ಅವಧಿಯಲ್ಲಿಯೇ ಅವರು ದುರಂತ ಅಂತ್ಯವಾಗಿದ್ದಾರೆ. ಇಲ್ಲಿನ ನಿವಾಸಿಯೊಬ್ಬರು ಕಷ್ಟಪಟ್ಟು ಮನೆ ನಿರ್ಮಿಸಿದ್ದು, ಅದರ ಪ್ರವೇಶದ ಸಡಗರವನ್ನು ಕಾರ್ಮಿಕನ ಸಾವು ಕಸಿದಿದೆ. ಜೊತೆಗೆ, ಆ ಸಾವು ಕಾರ್ಮಿಕನ ಕುಟುಂಬಕ್ಕೂ ದೊಡ್ಡ ಆಘಾತ ತಂದಿದೆ.
ಮಳೆ ಮುನ್ನಚ್ಚರಿಕೆಗಾಗಿ ನೂತನ ಮನೆಗೆ ಕಬ್ಬಿಣದ ಶೀಟುಗಳನ್ನು ಹಾಕಲಾಗಿತ್ತು. ಆ ಶೀಟಿನ ಚಾವಣಿಗಳನ್ನು ತೆರವು ಮಾಡುವುದಕ್ಕಾಗಿ ಭರತ ಗೌಡ ಅವರು ಆಗಮಿಸಿದ್ದರು. ಈ ವೇಳೆ ಕೆಲಸಕ್ಕೆ ಬಳಸುತ್ತಿದ್ದ ಏಣಿ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ಪರಿಣಾಮ ಏಣಿ ಹಿಡಿದಿದ್ದ ಭರತ ಗೌಡ ಅವರು ಅಲ್ಲಿಯೇ ಕುಸಿದುಬಿದ್ದಿದ್ದಾರೆ.
ಭರತ ಗೌಡ ಅವರನ್ನು ಉಪಚರಿಸುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ. ಏಣಿಯ ಮೂಲಕ ಪ್ರವೇಶಿಸಿದ ವಿದ್ಯುತ್ ಭರತ ಗೌಡ ಅವರ ಜೀವ ತೆಗೆದಿದೆ. ಸಾವಿನ ಮಾಹಿತಿ ಆಧರಿಸಿ ಪೊಲೀಸರು ಸ್ಥಳ ಭೇಟಿ ಮಾಡಿದ್ದಾರೆ.