ಉತ್ತರ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಸುನೀಲ ಕೋಳಿ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಆಸ್ಪತ್ರೆ ಸೇರಿಸುವ ಮೊದಲೇ ಅವರು ಸಾವನಪ್ಪಿದ್ದಾರೆ. ಅನಾರೋಗ್ಯದ ಕಾರಣ ನರಳಾಡುತ್ತಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.
Advertisement. Scroll to continue reading.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುನೀಲ್ ಅಣ್ಣಪ್ಪ ಕೋಳಿ ಅವರು ಸದ್ಯ ಕಾರವಾರದ ಉತ್ತರ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿದ್ದರು. 43 ವರ್ಷದ ಅವರು ಎಲ್ಲರ ಜೊತೆ ಚನ್ನಾಗಿಯೇ ಇದ್ದು, ಆರೋಗ್ಯದಲ್ಲಿಯೂ ದೊಡ್ಡ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ಆದರೆ, ಜೂನ್ 17ರಂದು ಬೆಳಗ್ಗೆ ಅವರು ಏಕಾಏಕಿ ಆಯಾಸಗೊಂಡರು. ಆರೋಗ್ಯದಲ್ಲಿ ಏರುಪೇರಾದ ಕಾರಣ ಡಿಎಆರ್ ಕಚೇರಿಯ ವಿಶ್ರಾಂತಿ ಕೊಠಡಿಗೆ ಹೋಗಿ ನಿದ್ರಿಸುವ ಪ್ರಯತ್ನ ಮಾಡಿದ್ದರು.
ಆದರೆ, ಎಷ್ಟು ಹೊತ್ತು ಕಳೆದರೂ ಅವರ ಆಯಾಸ ಕಡಿಮೆ ಆಗಲಿಲ್ಲ. ನಿದ್ದೆಯೂ ಬರಲಿಲ್ಲ. ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದ ಪರಿಣಾಮ ವಿಶ್ರಾಂತಿ ಕೋಣೆಯಲ್ಲಿಯೇ ನರಳಾಡುತ್ತಿದ್ದರು. ಮಧ್ಯಾಹ್ನ ಇದನ್ನು ಗಮನಿಸಿದ ಸಹದ್ಯೋಗಿಗಳು ತಕ್ಷಣ ಕಾರವಾರ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರು. ಆದರೆ, ದಾರಿ ಮಧ್ಯೆಯೇ ಸುನೀಲ ಕೋಳಿ ಅವರು ಉಸಿರು ನಿಲ್ಲಿಸಿದರು. ಆಸ್ಪತ್ರೆ ವೈದ್ಯರು ಸುನೀಲ ಕೋಳಿ ಅವರ ಸಾವನ್ನು ಖಚಿತಪಡಿಸಿದರು. ಸದ್ಯ ಸುನೀಲ ಕೋಳಿ ಅವರ ದೇಹ ಆಸ್ಪತ್ರೆಯ ಶವಾಗಾರದಲ್ಲಿದೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.