ಕಾರವಾರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ಸರ್ಕಾರಿ ಜೀಪನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಆ ಜೀಪಿನ ಬೆನ್ನು ಬಿದ್ದಿದ್ದು, ಕಾರಾಗೃಹ ಇಲಾಖೆ ಅಧಿಕಾರಿಯೊಬ್ಬರ ಜೀಪಿನ ನಿಯಮ ಉಲ್ಲಂಘನೆಯನ್ನು ಬಹಿರಂಗಪಡಿಸಿದ್ದಾರೆ.
ಕಾರವಾರದ ಕೇಂದ್ರ ಕಾರಾಗೃಹಕ್ಕೆ ಹೇಮವತಿ ಅವರು ಜೈಲರ್ ಆಗಿದ್ದಾರೆ. ಅವರು ಸಂಚರಿಸುವ ಸರ್ಕಾರಿ ಜೀಪಿಗೆ 15 ವರ್ಷ ಕಳೆದಿದೆ. ಆ ಜೀಪಿನ ವಿಮಾ ಅವಧಿಯೂ ಮುಗಿದಿದೆ. ಅದಾಗಿಯೂ, ಕಾರಾಗೃಹ ಇಲಾಖೆ ಆ ಜೀಪನ್ನು ಓಡಿಸುತ್ತಿದ್ದು, ಸಂಚಾರಿ ನಿಯಮಗಳೆಲ್ಲವನ್ನು ಗಾಳಿಗೆ ತೂರಲಾಗಿದೆ. ಇನ್ನೂ, ಈ ಜೀಪು ಎಡಕ್ಕೆ ಇಂಡಿಕೇಟರ್ ಹಾಕಿದರೆ ಬಲಕ್ಕೆ ತಿರುಗುತ್ತದೆ. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ವಿವಿಧ ವಿಡಿಯೋಗಳ ಮೂಲಕ ಶನಿವಾರ ಅದನ್ನು ಸೆರೆ ಹಿಡಿದು, ಸಂಚಾರಿ ಠಾಣೆ ಪೊಲೀಸರಿಗೆ ಫೋನ್ ಮಾಡಿದ್ದಾರೆ.
ಈ ದೂರಿನ ಹಿನ್ನಲೆ ಕಾರಾಗೃಹ ಸಿಬ್ಬಂದಿ ಆ ಗುಜುರಿ ಜೀಪಿನಲ್ಲಿ ಸಂಚರಿಸುತ್ತಿದ್ದಾಗಲೇ ತಡೆದಿದ್ದಾರೆ. ಪೊಲೀಸರು ಜೀಪ್ ಹಿಡಿದ ನಂತರ ಜೈಲರ್ ಹೇಮಾವತಿ ಅವರು ಜೀಪಿನಿಂದ ಇಳಿದು ಸಿಬ್ಬಂದಿಯೊಬ್ಬರ ಬೈಕ್ ಹತ್ತಿದ್ದಾರೆ. `ಪೊಲೀಸರು ಖಾಸಗಿ ವಾಹನಗಳ ದಾಖಲೆ ಮಾತ್ರ ಪರಿಶೀಲಿಸುತ್ತಾರೆ. ಸರ್ಕಾರಿ ಅಧಿಕಾರಿಗಳು ಸಂಚರಿಸುವ ವಾಹನಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕಾರಾಗೃಹ ಇಲಾಖೆ ಜೀಪಿನ ವಿಮಾ ಅವಧಿ ಮುಗಿದು ಮೂರು ವರ್ಷವಾದರೂ ಯಾರೂ ಗಮನಿಸಿಲ್ಲ. ಅಧಿಕಾರಿಗಳು ಸಂಚಾರಿ ನಿಯಮ ಉಲಂಘಿಸಿದರೂ ಕ್ರಮ ಜರುಗಿಸುತ್ತಿಲ್ಲ’ ಎಂದು ಜನ ಆಕ್ಷೇಪಿಸಿದ್ದಾರೆ.