ಕಳೆದ 35 ವರ್ಷಗಳಿಂದ ಹೊನ್ನಾವರದ ಖರ್ವಾ ಗ್ರಾಮ ಪಂಚಾಯತದಲ್ಲಿ ವಾಟರ್‌ಮ್ಯಾನ್ ಆಗಿದ್ದ ಗೋಪಾಲ ನಾಯ್ಕ ಅವರು ಗುಂಡುಬಾಳ ನದಿಯಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಊರಿನ ಜನರಿಗೆ ನೀರುಣಿಸಿದ ನಂತರ ಕೈ-ಕಾಲು ತೊಳೆಯಲು ಹೊಳೆಗೆ ಹೋಗಿದ್ದ ಅವರು ಅಲ್ಲಿಯೇ ಅಸುನೀಗಿದ್ದಾರೆ.
ಖರ್ವಾ ಗ್ರಾಮದ ಜಡ್ಡಿತ್ಲದಲ್ಲಿ ಗೋಪಾಲ ವೆಂಕ್ಟ ನಾಯ್ಕ ಅವರು ವಾಸವಾಗಿದ್ದರು. 55 ವರ್ಷದ ಅವರು 35 ವರ್ಷಗಳಿಂದ ಖರ್ವಾ ಗ್ರಾಮ ಪಂಚಾಯತದಿoದ ನೀರು ಬಿಡುವ ಕೆಲಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನದಿಂದ ಅವರು ನಿಗೂಢವಾಗಿ ನಾಪತ್ತೆಯಾಗಿದ್ದು, ಕುಟುಂಬಸ್ಥರು ಹಾಗೂ ಸ್ಥಳೀಯರು ರಾತ್ರಿ ಪೂರ್ತಿ ವಿವಿಧೆಡೆ ಹುಡುಕಾಟ ನಡೆಸಿದ್ದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ. ಶುಕ್ರವಾರ ಸಂಜೆ ವೇಳೆಗೆ ವಲ್ಕಿ ಪಳ್ಳಿಯಲ್ಲಿರುವ ಮಹಮದ್ ಮೀರಾ ಹಸನ್ ಸಿದ್ದಿ ಬಾಷಾ ಅವರ ಮನೆ ಬಳಿ ಶವವೊಂದು ಕಾಣಿಸಿತು.
ಗುಂಡಬಾಳ ನದಿಯ ವಲ್ಕಿ ಪಳ್ಳಿ ದಡದ ಬಳಿ ಶವವೊಂದು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ಮಂಜುನಾಥ ನೇತೃತ್ವದ ತಂಡ ಸ್ಥಳೀಯರ ನೆರವಿನಿಂದ ಶವವನ್ನು ನದಿಯಿಂದ ಮೇಲಕ್ಕೆತ್ತಿ ಪರಿಶೀಲನೆ ನಡೆಸಿತು. ಈ ವೇಳೆ ಗೋಪಾಲ ನಾಯ್ಕ ಅವರ ಪುತ್ರಿ ದೀಪಿಕಾ ನಾಯ್ಕ ಅವರು ಅಲ್ಲಿಗೆ ಆಗಮಿಸಿ, ತಂದೆಯ ಶವ ಗುರುತಿಸಿದರು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.