ಕಾರವಾರದ ಜೈದುರ್ಗಾ ಮಾತಾ ಸೌಹಾರ್ದ ಸಹಕಾರಿಯಲ್ಲಿ 52 ಕೋಟಿ ರೂ ಮೊತ್ತದ ವಂಚನೆ ನಡೆದಿದ್ದು, ಆರು ಸಾವಿರಕ್ಕೂ ಅಧಿಕ ಜನ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಅಲ್ಲಿನ ಠೇವಣಿದಾರರು ಆಗ್ರಹಿಸಿದ್ದಾರೆ.
ಜೈದುರ್ಗಾ ಮಾತಾ ಸೌಹಾರ್ದ ಸಹಕಾರಿಯಲ್ಲಿ ಠೇವಣಿ ಮಾಡಿದ ಗ್ರಾಹಕರು ಶನಿವಾರ ಪ್ರತಿಭಟನೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಜನ ವ ಸಹಕಾರಿಯ ನಿರ್ದೇಶಕ ಲಿಂಗರಾಜ ಪುತ್ತು ಕಲ್ಗುಟಕರ ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. ವಂಚನೆ ನಡೆದು ವರ್ಷ ಕಳೆದರೂ ಸಿಐಡಿ ವಿಶೇಷ ಘಟಕ ಹಾಗೂ ಬೆಂಗಳೂರು ಆರ್ಥಿಕ ಅಪರಾಧ ವಿಭಾಗವು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸದ ಬಗ್ಗೆ ಆಕ್ಷೇಪವ್ಯಕ್ತಪಡಿಸಿದ್ದಾರೆ.
`ಈ ಪ್ರಕರಣದ ತ್ವರಿತ ತನಿಖೆಗಾಗಿ ಕಾರವಾರ ಸಹಾಯಕ ಆಯುಕ್ತರನ್ನು ನೇಮಿಸಲಾಗಿದ್ದರೂ ತನಿಖೆ ಮುಂದುವರೆದಿಲ್ಲ. ತನಿಖೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದ್ದು, ಅದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. `ತಕ್ಷಣ ಸರ್ಕಾರ ಮಧ್ಯಪ್ರವೇಶಿಸಿ ತನಿಖೆಯನ್ನು ಚುರುಕುಗೊಳಿಸಬೇಕು. ಗ್ರಾಹಕರ ಹಣವನ್ನು ಮರಳಿಸಬೇಕು’ ಎಂದು ಆಗ್ರಹಿಸಿದ್ದಾರೆ. ಇದೇ ವಿಷಯವಾಗಿ ಜುಲೈ 15ರಂದು ಬೆಂಗಳೂರಿನ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ.