ಮುಂಡಗೋಡಿನ ಅಮೃತ ಸರೋವರದ ಬಳಿ ಕೂಲಿ ಕೆಲಸಕ್ಕೆ ಬಂದ ಕಾರ್ಮಿಕರು ಕೈ ಮುಗಿದು ಕೂತಿದ್ದಾರೆ. ಸರ್ಕಾರದ ಸೂಚನೆ ಪ್ರಕಾರ ಅವರೆಲ್ಲರೂ ಅಲ್ಲಿ ಈ ದಿನ ಯೋಗ ಅಭ್ಯಾಸ ಮಾಡಿದ್ದಾರೆ.
ಕೂಲಿ ಕಾರ್ಮಿಕರೆಲ್ಲರೂ ಯೋಗ ಮಾಡಬೇಕು ಎಂದು ಆಯುಕ್ತಾಲಯ ನಿರ್ದೇಶನ ನೀಡಿತ್ತು. ಹೀಗಾಗಿ ಈ ದಿನ ಕೂಲಿ ಕೆಲಸಕ್ಕೆ ಬಂದವರು ಹಾಜರಾತಿ ಹಾಕಿ ಯೋಗ ಶುರು ಮಾಡಿದರು. ಮುಂಡಗೋಡದ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಯೋಗ ಕಾರ್ಯಕ್ರಮ ನಡೆಯಿತು. ನರೆಗಾ ಅಡಿ ಅಭಿವೃದ್ಧಿಪಡಿಸಿದ ಅಮೃತ ಸರೋವರದ ದಡದ ಮೇಲೆಯೂ ಕಾರ್ಮಿಕರು ಯೋಗ ಅಭ್ಯಾಸ ನಡೆಸಿದರು.
ಈ ಕಾರ್ಯಕ್ರಮದಲ್ಲಿ ನರೇಗಾ ಕೂಲಿ ಕಾರ್ಮಿಕರ ಜೊತೆ ಕಾಯಕ ಬಂಧುಗಳು ಭಾಗವಹಿಸಿ ಯೋಗಾಭ್ಯಾಸ ನಡೆಸಿದರು. ಇದೇ ವೇಳೆ ದೈನಂದಿನ ಜೀವನದಲ್ಲಿ ಯೋಗಾಭ್ಯಾಸ ರೂಢಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ಸಕಾರಾತ್ಮಕ ಪ್ರಭಾವ, ವಿವಿಧ ಯೋಗ ಆಸನಗಳ ಮಹತ್ವ ಮತ್ತು ಉಪಯೋಗ ಹಾಗೂ ಆರೋಗ್ಯಕರ ಜೀವನಶೈಲಿಯ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸಲಾಯಿತು. ಪ್ರತಿದಿನವೂ ಎಲ್ಲರೂ ತಪ್ಪದೆ ಯೋಗ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆಯೂ ಕರೆ ನೀಡಲಾಯಿತು.