ಹಸಿದ ಹೊಟ್ಟೆಗೆ ಊಟ ಕೊಡಲು ಯೋಗ್ಯತೆ ಇಲ್ಲದ ಕುಮಟಾದ ಗೋವರ್ಧನ ರೆಸ್ಟೋರೆಂಟಿನವರು ಊಟ ಬಯಸಿ ಬಂದ ಭಿಕ್ಷುಕರಿಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. `ಹಣ ಕೊಟ್ಟು ಊಟ ಮಾಡುತ್ತೇವೆ’ ಎಂದರೂ ಅವರಿಗೆ ಊಟ ಕೊಡಲು ನಿರಾಕರಿಸಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಸಾಗರ ತಾಲೂಕಿನ ಆಲಮಟ್ಟಿ ಗ್ರಾಮದ ರಮೇಶ ಹಾಗೂ ದ್ಯಾಮವ್ವ ದಂಪತಿ ಯಲ್ಲಮ್ಮ ದೇವಿಯ ಮೂರ್ತಿ ಹೊತ್ತು ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧವಿದ್ದರೂ ಅದರ ಅರಿವಿಲ್ಲದೇ ಆ ದಂಪತಿ ದೇವರ ಹೆಸರಿನಲ್ಲಿ ಎಲ್ಲಡೆ ಸಂಚರಿಸಿ ಕಾಸು ಸಂಗ್ರಹಿಸುತ್ತಾರೆ. ಸೋಮವಾರ ಮಧ್ಯಾಹ್ನ ಹೊಟ್ಟೆ ಹಸಿದ ಕಾರಣ ಜನರಿಂದ ಸಂಗ್ರಹಿಸಿದ ಚಿಲ್ಲರೆ ಹಣ ಬಳಸಿ ಊಟ ಮಾಡಲು ಅವರು ನಿರ್ಧರಿಸಿದ್ದಾರೆ. ಇದಕ್ಕಾಗಿ ಆ ದಂಪತಿ ಕುಮಟಾ ಹೊಸ ಬಸ್ ನಿಲ್ದಾಣ ಬಳಿಯ ಗೋವರ್ಧನ ರೆಸ್ಟೋರೆಂಟಿನ ಒಳಗೆ ಪ್ರವೇಶಿಸಿದ್ದಾರೆ. ಆ ದಂಪತಿಯ ವೇಷ-ಭೂಷಣ ನೋಡಿದ ಹೊಟೇಲಿನವರು ಅವರನ್ನು ಹೊರಗೆ ದಬ್ಬಿದ್ದಾರೆ. `ಕಾಸು ಕೊಟ್ಟು ಊಟ ಮಾಡುತ್ತೇವೆ’ ಎಂದರೂ ಸಹ ಅದಕ್ಕೆ ಅವಕಾಶ ಕೊಟ್ಟಿಲ್ಲ. ಅಲ್ಲಿಯೇ ಇದ್ದ ಭಿಕ್ಷÄಕ ದಂಪತಿ ಮೇಲೆ ಹೊಟೇಲಿನವರು ಹಲ್ಲೆ ಮಾಡಿದ್ದು, ಇದನ್ನು ನೋಡಿ ಅಲ್ಲಿ ಜನ ಜಮಾಯಿಸಿದ್ದಾರೆ.
ಹೋಟೆಲ್ ಮಾಲಕ ಗಣೇಶ ನಾಯ್ಕ ಹಾಗೂ ಸೆಕ್ಯೂರಿಟಿ ಗಾರ್ಡ್ ಸೇರಿ ಭಿಕ್ಷುಕರಿಬ್ಬರ ಮೇಲೆ ದಾಳಿ ಮಾಡಿದ್ದಾರೆ. `ಊಟ ಕೊಡಲಾಗದಿದ್ದರೂ ಪರವಾಗಿಲ್ಲ. ಹೊಡೆಯಬೇಡಿ’ ಎಂದು ಆ ದಂಪತಿ ಅಂಗಲಾಚಿದರೂ ಗಣೇಶ ನಾಯ್ಕ ಅವರು ತಮ್ಮ ಸಿಟ್ಟು ಕಡಿಮೆ ಆಗುವವರೆಗೂ ಥಳಿಸಿದ್ದಾರೆ. ಅದಾದ ನಂತರ ಜಮಾಯಿಸಿದ ಜನ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪಿಸೈ ಖಾದರ್ ಭಾಷಾ ಹಾಗೂ ರವಿ ಗುಡ್ಡಿ ಅವರು ರಿಕ್ಷಾ ಮೂಲಕ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.