1998ರಲ್ಲಿ ಅರಣ್ಯ ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡವರಿಗೆ 27 ವರ್ಷದ ನಂತರ ಅರಣ್ಯ ಇಲಾಖೆ ನೋಟಿಸ್ ನೀಡುತ್ತಿದೆ. ಆ ವೇಳೆ ಅರಣ್ಯ ಅಧಿಕಾರಿಗಳು ದಾಖಲಿಸಿದ ಪ್ರಕರಣ ವಿಷಯವಾಗಿ ವಿಚಾರಣೆಗೆ ಬರುವಂತೆ ಅರಣ್ಯ ಅತಿಕ್ರಮಣದಾರರಿಗೆ ಪತ್ರ ಬಂದಿದೆ.
ಮುoಡಗೋಡಿನ ಕಾತೂರು ವಲಯದ ಅನೇಕರಿಗೆ ಅಕ್ಟೊಬರ್ 29ರಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸಹಿ ಮಾಡಿ ಈ ಸೂಚನಾ ಪತ್ರ ರವಾನಿಸಿದ್ದಾರೆ. `ವಿಚಾರಣೆಗೆ ಹಾಜರಾಗದೇ ಇದ್ದರೆ ನಿಮ್ಮ ಹೇಳಿಕೆ ಏನೂ ಇಲ್ಲ’ ಎಂದು ಪರಿಗಣಿಸುವ ಬಗ್ಗೆಯೂ ನೋಟಿಸ್ ಮೂಲಕ ಎಚ್ಚರಿಕೆ ನೀಡಲಾಗಿದೆ.
ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಿದ ಬಗ್ಗೆ ಲಿಖಿತ ಹೇಳಿಕೆ ಸಲ್ಲಿಸುವಂತೆ ಅಧಿಕಾರಿಗಳು ನೋಟಿಸ್ ಮೂಲಕ ತಿಳಿಸಿದ್ದಾರೆ. ಅದರೊಂದಿಗೆ ಭೂ ಮಂಜೂರಾತಿ ಕೋರಿ ಸಲ್ಲಿಸಿದ ಅರ್ಜಿ, ಮಂಜೂರಾತಿ ಆದೇಶ, ಮೂಲ ಅರ್ಜಿದಾರರಿಂದಹಿಡಿದು ಸದ್ಯ ಹಿಡುವಳಿಹೊಂದಿರುವವರೆಗಿನ ಎಲ್ಲಾ ಕಾಗದಪತ್ರಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದಾರೆ.
ಈ ಎಲ್ಲ ವಿಷಯಗಳ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಿದರು. ವಿಚಾರಣೆಗೆ ಹಾಜರಾಗಲು ಬಂದಿರುವAತಹ ಅರಣ್ಯವಾಸಿಗಳೊಂದಿಗೆ ಅವರು ಸಮಾಲೋನೆ ನಡೆಸಿದ್ದು, ಅವರಿಗೆ ವಿವಿಧ ಸಲಹೆ ನೀಡಿದರು. ಸಂಘಟನೆ ಸಂಚಾಲಕರಾದ ಗಣಪತಿ ಟಿ ನಾಯ್ಕ ಬಾಳೆಕೊಪ್ಪ, ಗಣಪ ಯಂಕ ಗೌಡ ಮುಳಗುಂದ, ಜಯಪ್ಪ ನಾಯ್ಕ ಬೆಕ್ಕೋಡ, ಗಿರಿಯ ಟಿ ನಾಯ್ಕ ಬಟಕ್ಕೋಡ, ಶಿವಾಜಿ ನಾಯ್ಕ ಬೆಡಸಗಾಂವ್, ನೆಹರು ನಾಯ್ಕ, ಗಣಪತಿ ಹೆಗಡೆ ಕೂರ್ಲಿ ಜೊತೆಗಿದ್ದು ವಿವರ ಕೇಳಿದರು.