ಮಹಿಳೆಯರಿಬ್ಬರು ಸೇರಿ ಹೊಡೆದ ಪರಿಣಾಮ ಸಿದ್ದಾಪುರದ ಗಣಪತಿ ನಾಯ್ಕ ಅವರು ಆಸ್ಪತ್ರೆ ಸೇರಿದ್ದಾರೆ. ಅರಣ್ಯ ಅತಿಕ್ರಮಣ ಪ್ರದೇಶಕ್ಕೆ ಪ್ರವೇಶಿಸಿದನ್ನು ಸಹಿಸದ ಆಶಾ ಹಾಗೂ ಕಲ್ಪನಾ ಎಂಬಾತರು ಗಣಪತಿ ನಾಯ್ಕ ಅವರಿಗೆ ಥಳಿಸಿದ್ದು, ರಾಘವೇಂದ್ರ ಭಂಡಾರಿ ಅವರು ಈ ಹೊಡೆದಾಟಕ್ಕೆ ಸಹಕಾರ ನೀಡಿದ್ದಾರೆ!
ಸಿದ್ದಾಪುರದ ಕಾನೂಸರು ಮಾರುತಿ ನಗರದ ಗಣಪತಿ ಬಂಗಾರ್ಯ ನಾಯ್ಕ ಅವರ ಕುಟುಂಬದವರು ಅನಾಧಿಕಾಲದಿಂದಲೂ ಅರಣ್ಯ ಅತಿಕ್ರಮಿಸಿಕೊಂಡಿದ್ದರು. ಪೂರ್ವಜರು ಮಾಡಿಟ್ಟ ಅತಿಕ್ರಮಣ ಪ್ರದೇಶವಾದ ಕಾನಸೂರಿನ ಸರ್ವೇ ನಂ 16/3ರಲ್ಲಿ ಗಣಪತಿ ನಾಯ್ಕ ಅವರು ಕೆಲಸ ಮಾಡುತ್ತಿದ್ದರು. ಆ ಪ್ರದೇಶದ ಪಕ್ಕದಲ್ಲಿ ರಾಘವೇಂದ್ರ ಗೋಪಾಲ ಭಂಡಾರಿ ಅವರ ಮನೆಯೂ ಇತ್ತು. ಹೀಗಾಗಿ ಗಣಪತಿ ನಾಯ್ಕ ಅವರು ಅತಿಕ್ರಮಣ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡುವುದನ್ನು ರಾಘವೇಂದ್ರ ಭಂಡಾರಿ ಅವರು ಸಹಿಸುತ್ತಿರಲಿಲ್ಲ.
`ಈ ಭೂಮಿ ನಿನಗೆ ಸೇರಿದಲ್ಲ. ಇಲ್ಲಿ ಬರಬೇಡ’ ಎಂದು ಸಾಕಷ್ಟು ಬಾರಿ ರಾಘವೇಂದ್ರ ಭಂಡಾರಿ ಅವರು ಸೂಚಿಸಿದ್ದರು. ಅದಾಗಿಯೂ ಗಣಪತಿ ನಾಯ್ಕ ಅವರು ಆ ಭೂಮಿಯಲ್ಲಿ ಅಭಿವೃದ್ಧಿ ಕೆಲಸ ಮುಂದುವರೆಸಿದ್ದರು. ಇದೇ ಕಾರಣದಿಂದ ಗಣಪತಿ ನಾಯ್ಕ ಹಾಗೂ ರಾಘವೇಂದ್ರ ಭಂಡಾರಿ ಅವರ ನಡುವೆ ದ್ವೇಷ ಮೂಡಿತ್ತು. ಹೀಗಾಗಿ
ಗಣಪತಿ ನಾಯ್ಕ ಅವರು ಅಲ್ಲಿ ಕೆಲಸ ಮಾಡುವಾಗ ರಾಘವೇಂದ್ರ ಭಂಡಾರಿ ಅವರು ತಕರಾರು ಮಾಡುವುದು ಸಾಮಾನ್ಯವಾಗಿತ್ತು.
ಅಕ್ಟೊಬರ್ 28ರಂದು ಗಣಪತಿ ನಾಯ್ಕ ಅವರು ಆ ಅತಿಕ್ರಮಣ ಭೂಮಿಗೆ ತೆರಳಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಬಡಿಗೆಹಿಡಿದು ಬಂದ ರಾಘವೇಂದ್ರ ಭಂಡಾರಿ ಅವರು ಗಣಪತಿ ನಾಯ್ಕ ಅವರಿಗೆ ಬಾರಿಸಿದರು. ಇದಕ್ಕೆ ಕಾಯುತ್ತಿದ್ದ ಆಶಾ ಹಾಗೂ ಕಲ್ಪನಾ ಅವರು ಗಣಪತಿ ನಾಯ್ಕ ಅವರನ್ನು ಹಿಡಿದು ಥಳಿಸಿದರು. ಈ ಮೂವರು ಸೇರಿ ಗಣಪತಿ ನಾಯ್ಕ ಅವರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದು ನೋವು ಮಾಡಿದರು. ಗಣಪತಿ ನಾಯ್ಕ ಅವರು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದಿದ್ದು, ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಪೊಲೀಸರಿಗೆ ದೂರಿದರು.