ಹೊನ್ನಾವರ – ಚಂದಾವರ ರಸ್ತೆಯಲ್ಲಿ ಎರಡು ಜಾನುವಾರುಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದೆ. ಸಾವನಪ್ಪಿದ ಜಾನುವಾರುಗಳ ಬಾಯಿಂದ ನೊರೆ, ಹಿಂಬದಿ ರಕ್ತ ಹಾಗೂ ಹೊಟ್ಟೆ ಉಬ್ಬಿರುವುದನ್ನು ಸ್ಥಳೀಯರು ನೋಡಿದ್ದಾರೆ.
ಅಕ್ಟೊಬರ್ 30ರಂದು ಕೆಕ್ಕಾರ ಕ್ರಾಸಿನ ಬಳಿ ಜಾನುವಾರುಗಳು ಸಾವನಪ್ಪಿದ ಸ್ಥಿತಿಯಲ್ಲಿದ್ದವು. ಮೊದಲು ಅಕ್ರಮ ಜಾನುವಾರು ಸಾಗಾಟಗಾರರು ಹಿಂಸಾತ್ಮಕ ರೀತಿ ಈ ಪ್ರಾಣಿಗಳನ್ನು ಸಾಗಿಸುವಾಗ ಅವು ಸಾವನಪ್ಪಿರುವ ಶಂಕೆವ್ಯಕ್ತವಾಯಿತು. ಅದಾದ ನಂತರ ಜಾನುವಾರುಗಳು ಅಪರಿಚಿತ ವಾಹನಕ್ಕೆ ಡಿಕ್ಕಿಯಾಗಿ ಸಾವನಪ್ಪಿರುವ ಬಗ್ಗೆ ಅಂದಾಜಿಸಲಾಗಿತ್ತು. ಆದರೆ, ಜಾನುವಾರುಗಳ ಬಾಯಿಂದ ನೊರೆ ಬಂದಿರುವುದು ಹಾಗೂ ಹೊಟ್ಟೆ ಉಬ್ಬಿರುವುದನ್ನು ನೋಡಿ ವಿಷ ಪ್ರಾಶನದ ಅನುಮಾನಗಳು ಹುಟ್ಟಿದವು. ಆದರೆ, ಇದ್ಯಾವುದು ಖಚಿತವಾಗಲಿಲ್ಲ.
ಎತ್ತು ಹಾಗೂ ಎಮ್ಮೆ ಕರು ಸಾವನಪ್ಪಿದ ವಿಷಯ ಕೇಳಿ ಕಡತೋಕಾದ ಗಿರೀಶ ಸುಬ್ರಾಯ ಹೆಗಡೆ, ಕೆಕ್ಕಾರಿನ ಕೃಷ್ಣ ನಾರಾಯಣ ಗೌಡ ಅವರು ಅಲ್ಲಿಗೆ ಬಂದರು. ಹೊದ್ಕೆಶೀರೂರಿನ ಅರಣ್ಯ ಇಲಾಖೆ ಸಿಬ್ಬಂದಿ ವಾಮನ ನಾಯ್ಕ ಅವರು ಸ್ಥಳಕ್ಕೆ ಆಗಮಿಸಿದರು. ಎಲ್ಲರೂ ಸೇರಿ ಚರ್ಚಿಸಿದರೂ ಸಹ ಸಾವನಪ್ಪಿದ ಎರಡು ಜಾನುವಾರುಗಳ ಮಾಲಕ ಯಾರು? ಎಂಬುದು ಗೊತ್ತಾಗಲಿಲ್ಲ. ಕಿಡಿಗೇಡಿಗಳ ಕೃತ್ಯದಿಂದಲೇ ಜಾನುವಾರು ಸಾವನಪ್ಪಿರುವುದು ಮೇಲ್ನೋಟಕ್ಕೆ ಕಾಣುವ ಹಾಗಿತ್ತು.
ಈ ಎಲ್ಲಾ ಹಿನ್ನಲೆ ಅರಣ್ಯ ಸಿಬ್ಬಂದಿ ವಾಮನ ನಾಯ್ಕ ಅವರು ಪೊಲೀಸ್ ದೂರು ನೀಡಿದರು. ಜಾನುವಾರು ಹತ್ಯೆಗೆ ಕಾರಣರಾದವರನ್ನು ಹುಡುಕಿ ಕಠಿಣ ಕ್ರಮಕ್ಕಾಗಿ ಅವರು ಪ್ರಕರಣ ದಾಖಲಿಸಿದರು.