ಕುಮಟಾದ ಕೂಲಿ ಕಾರ್ಮಿಕ ರಾಘವೇಂದ್ರ ಗೌಡ ಹಾಗೂ ಚಾಲಕ ರವಿ ಪಟಗಾರ ಅವರ ನಡುವೆ ಹೊಡೆದಾಟ ನಡೆದಿದೆ. ಕಳೆದ ತಿಂಗಳು ನಡೆದ ಈ ಮಾರಾಮಾರಿ ಇದೀಗ ನ್ಯಾಯಾಲಯದ ಅಂಗಳಕ್ಕೆ ಬಂದು ನಿಂತಿದೆ.
ಕುಮಟಾದ ಶೋಕನಮಕ್ಕಿಯಲ್ಲಿ ರಾಘವೇಂದ್ರ ಹೊಸಬು ಗೌಡ ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ಊರಿನ ರವಿ ಪರಮೇಶ್ವರ ಪಟಗಾರ ಅವರು ಚಾಲಕರಾಗಿದ್ದಾರೆ. ಈ ಇಬ್ಬರ ನಡುವೆ ಮೊದಲಿನಿಂದಲೂ ದ್ವೇಷವಿದ್ದು, ಪರಸ್ಪರ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ಹಳೆ ವೈಮನಸ್ಸಿನ ಕಾರಣ ಅವರಿಬ್ಬರು ಒಬ್ಬರ ಬಗ್ಗೆ ಇನ್ನೊಬ್ಬರು ಅಸೂಯೆಯನ್ನು ಹೊಂದಿದ್ದರು.
2025ರ ಸೆಪ್ಟೆಂಬರ್ 10ರಂದು ರಾಘವೇಂದ್ರ ಗೌಡ ಅವರು ಕುಮಟಾ ಪಟ್ಟಣದ ಬಸ್ ನಿಲ್ದಾಣದ ಬಳಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ರಾತ್ರಿ 8 ಗಂಟೆಗೆ ಅವರು ಮೀನು ತರಲು ಪೇಟೆಗೆ ಹೊರಟರು. ಅಲ್ಲಿ ಅವರಿಗೆ ರವಿ ಪಟಗಾರ ಅವರು ಎದುರಾದರು. ಒಬ್ಬರನ್ನು ಒಬ್ಬರು ದುರುಗುಟ್ಟಿ ನೋಡಿದರು. ಇದರಿಂದ ಸಿಟ್ಟಾದ ರವಿ ಪಟಗಾರ್ ಅವರು ರಾಘವೇಂದ್ರ ಗೌಡ ಅವರಿಗೆ ಬೈಯಲು ಶುರು ಮಾಡಿದರು. ರಾಘವೇಂದ್ರ ಗೌಡ ಅವರು ಸಹ ಸುಮ್ಮನಿರಲಿಲ್ಲ.
ಪರಿಣಾಮ ಅವರಿಬ್ಬರ ನಡುವೆ ಕಾಳಗ ಶುರುವಾಯಿತು. ರವಿ ಪಟಗಾರ ಅವರು ರಾಘವೇಂದ್ರ ಗೌಡ ಅವರನ್ನು ಹಿಡಿದು ಥಳಿಸಿದರು. ನೆಲಕ್ಕೆ ದೂಡಿ ಪೆಟ್ಟು ಮಾಡಿದರು. `ಕೊಚ್ಚಿ ಹೊಳೆಗೆ ಹೂಳುವೆ’ ಎಂದು ಬೆದರಿಕೆ ಹಾಕಿದರು. ಸೆಪ್ಟೆಂಬರ್ 16ರಂದು ರಾಘವೇಂದ್ರ ಗೌಡ ಅವರು ಇದನ್ನು ಪೊಲೀಸರ ಬಳಿ ಹೇಳಿದರು. ಪೊಲೀಸರು ಅವರಿಬ್ಬರ ದ್ವೇಷ ಶಮನ ಮಾಡುವುದಕ್ಕಾಗಿ ರಾಜಿಗೆ ಮುಂದಾದರು. ಆದರೆ, ರಾಘವೇಂದ್ರ ಗೌಡ ಅದಕ್ಕೆ ಒಪ್ಪದೇ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಕುಮಟಾ ಪೊಲೀಸರು ಇದೀಗ ಪ್ರಕರಣ ದಾಖಲಿಸಿದ್ದಾರೆ.