ರಾಜಕೀಯದಿಂದ ನಿವೃತ್ತಿಪಡೆಯುವುದಾಗಿ ಈ ಹಿಂದೆ ಸಾಕಷ್ಟು ಬಾರಿ ತಾಯಿ ಹಾಗೂ ಮಗಳ ಮೇಲೆಯೂ ಆಣೆ ಮಾಡಿದ್ದ ಶಾಸಕ ಸತೀಶ್ ಸೈಲ್ ಮಂಗಳವಾರ ಮತ್ತೆ ಅದೇ ಮಾತು ಪುನರುಚ್ಚರಿಸಿದ್ದಾರೆ. `ಸುಸಜ್ಜಿತ ಆಸ್ಪತ್ರೆ ಮಂಜೂರಿ ಮಾಡದೇ ಇದ್ದರೆ ರಾಜಕೀಯದಿಂದ ನಿವೃತ್ತಿ ಆಗುವೆ’ ಎಂದವರು ಈ ದಿನ ಹೇಳಿದ್ದಾರೆ.
`ಮುಂದಿನ ಸಲ ಚುನಾವಣೆಗೆ ನಿಲ್ಲಲ್ಲ’ ಎಂದು ಸತೀಶ್ ಸೈಲ್ ಅನೇಕ ಭಾಷಣಗಳಲ್ಲಿ ಹೇಳಿದ್ದರು. `ನನಗೆ ರಾಜಕೀಯ ಅಗತ್ಯವಿಲ್ಲ’ ಎಂದು ಸಹ ಅವರು ಹೇಳಿಕೊಂಡಿದ್ದರು. ತಮ್ಮ ಭಾಷಣದಲ್ಲಿ ಸಹ ಅವರು ತಾಯಿ ಹಾಗೂ ಮಗಳ ಮೇಲೆ ಆಣೆ ಮಾಡಿ ರಾಜಕೀಯದಿಂದ ದೂರವಿರುವ ಬಗ್ಗೆ ಮಾತನಾಡಿದ್ದರು. ಮಂಗಳವಾರ ಸಹ ಅವರು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.
`ಮುಂದಿನ ಬಜೆಟ್ ಒಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸದಿದ್ದರೆ ರಾಜಕೀಯ ನಿವೃತ್ತಿ ಖಚಿತ. ಬೇರೆ ಯಾವ ಪಕ್ಷವನ್ನು ಸೇರದೇ ಮನೆಗೆ ಮರಳುತ್ತೇನೆ’ ಎಂದವರು ಹೇಳಿದ್ದಾರೆ. `ಆಸ್ಪತ್ರೆ ನಿರ್ಮಾಣ ಸಾಧ್ಯವಿಲ್ಲ ಎಂದಾದರೆ ನಾನು ಜನ ಸೇವೆಗೆ ಯೋಗ್ಯನಲ್ಲ ಎಂದರ್ಥ. ಹೀಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿಗಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ನವೆಂಬರ್ ತಿಂಗಳಿನಲ್ಲಿ ಭೇಟಿ ಆಗಲು ಅವರು ಹೇಳಿದ್ದು, ಮಾರ್ಚ ಅವಧಿಯಲ್ಲಿ ನಡೆಯುವ ಬಜೆಟಿನಲ್ಲಿ ಆಸ್ಪತ್ರೆ ಮಂಜೂರಾಗುವ ಭರವಸೆಯಿದೆ. ಅದು ಆಗಿಲ್ಲ ಎಂದಾದರೆ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ’ ಎಂದವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
`ಬಜೆಟಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗದೇ ಇದ್ದರೆ ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಯಾವ ಕೆಲಸವನ್ನು ಮಾಡುವುದಿಲ್ಲ. ಮನೆಗೆ ಮರಳುತ್ತೇನೆ’ ಎಂದಿದ್ದಾರೆ. `ಸರ್ಕಾರ ನೀಡಿದ 5 ಯೋಜನೆಗಳು ಉತ್ತಮವಾಗಿದೆ. ಸರ್ಕಾರದ ಮೇಲೆ ನನಗೆ ನಂಬಿಕೆಯಿದ್ದು, ಆಸ್ಪತ್ರೆ ಘೋಷಣೆ ಆಗಿಯೇ ಆಗುತ್ತದೆ’ ಎಂದವರು ವಿಶ್ವಾಸದ ಮಾತನಾಡಿದ್ದಾರೆ. `ಸರ್ಕಾರಕ್ಕೆ ನಾನು ಎಚ್ಚರಿಕೆ ನೀಡುತ್ತಿಲ್ಲ. ವಿನಂತಿ ಮಾಡಿದ್ದೇನೆ’ ಎಂದು ಸಹ ಹೇಳಿದ್ದಾರೆ.