ಭಟ್ಕಳದ ವೈದ್ಯರೊಬ್ಬರು ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಆ ವೈದ್ಯರ ಜೊತೆ ಮದುವೆ ಮಾಡಿಸುವಂತೆ ಕೋರಿ ಆ ಮಹಿಳೆ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.
ಭಟ್ಕಳದ ಹೆಬಳೆ ಗಾಂಧೀನಗರದಲ್ಲಿ ವಾಸಿಸುವ 25 ವರ್ಷದ ಮಹಿಳೆಯನ್ನು ಆಜಾದ್ ನಗರದ ಆರನೇ ಕ್ರಾಸಿನ ಡಾ ನಾಸೀರ್ ಅಹ್ಮದ್ ಎಂ ಎಂ ಅಲಿ ಸಾಹೇಬ್ ಅವರು ಪುಸಲಾಯಿಸಿದ್ದರು. ಮದುವೆ ಆಗುವುದಾಗಿ ನಂಬಿಸಿ ಆ ಮಹಿಳೆಯನ್ನು ಭಟ್ಕಳ, ಹೊನ್ನಾವರ, ಚಿಕ್ಕಮಗಳೂರು ಹಾಗೂ ಬೆಂಗಳೂರಿಗೆ ಕರೆದೊಯ್ದು ಸುತ್ತಾಡಿಸಿದ್ದರು. ತಿರುಗಾಟದ ನಂತರ ಅವರು ಆ ಮಹಿಳೆಯನ್ನು ಲಾಡ್ಜಿಗೆ ಕರೆದೊಯ್ದು ದೈಹಿಕವಾಗಿಯೂ ಬಳಸಿಕೊಂಡಿದ್ದರು.
10 ದಿನಗಳ ಕಾಲ ಬೇರೆ ಬೇರೆ ಮಹಿಳೆ ಜೊತೆ ಸುತ್ತಾಟ ನಡೆಸಿದ ಡಾ ನಾಸೀರ್ ಅಹ್ಮದ್ ಆ ಅವಧಿಯಲ್ಲಿ ಮದುವೆ ಆಗುವ ಭರವಸೆ ನೀಡಿದ್ದರು. ಆದರೆ, ನಂತರ ತಮ್ಮ ಮಾತಿನ ವರಸೆ ಬದಲಿಸಿದರು. ಬಲವಂತವಾಗಿ ಬಲಾತ್ಕಾರ ನಡೆಸಿದಲ್ಲದೇ ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದರು. ಅದಾಗಿಯೂ ಆ ಮಹಿಳೆ ತಮಗಾದ ಮೋಸ, ವಂಚನೆ, ಅಪಹರಣ, ಅತ್ಯಾಚಾರ ಹಾಗೂ ಅನ್ಯಾಯದ ಬಗ್ಗೆ ಪೊಲೀಸ್ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.