ತಿoಗಳ ನಂತರ ಶಿರಸಿಯಲ್ಲಿ ಮತ್ತೆ ಏರಗನ್ ಗುಂಡು ಸದ್ದು ಮಾಡಿದ್ದು, ಈ ಬಾರಿ ಆ ಗುಂಡು ಬಾಲಕನ ಕುಂಡೆಯೊಳಗೆ ಸಿಕ್ಕಿ ಬಿದ್ದಿದೆ. TSS ಆಸ್ಪತ್ರೆಯ ವೈದ್ಯರು ಹರಸಾಹಸದಿಂದ ಗುಂಡು ಹೊರತೆಗೆದು ಬಾಲಕನ ಜೀವ ಕಾಪಾಡಿದ್ದಾರೆ.
ಸೆಪ್ಟೆಂಬರ್ 5ರಂದು ಸಹ ಶಿರಸಿಯ ಸೋಮನಳ್ಳಿಯಲ್ಲಿ ಗುಂಡಿನ ಸದ್ದು ಕೇಳಿಸಿತ್ತು. ಮಂಗನ ಕಾಯಲು ಬಂದಿದ್ದ ನಿತೀಶ್ ಎಂಬಾತರು ಮಾಡಿದ ತಪ್ಪಿಗೆ 9 ವರ್ಷದ ಕರಿಯಪ್ಪ ಎಂಬಾತರು ಸಾವನಪ್ಪಿದ್ದರು. ಇದೀಗ ಮತ್ತೆ ಅಂಥಹುದೇ ವಿದ್ಯಮಾನ ಮರುಕಳಿಸಿದ್ದು, ಟಿಎಸ್‌ಎಸ್ ವೈದ್ಯರ ಸಾಹಸದಿಂದಾಗಿ ಬಾಲಕನಿಗೆ ಮರುಜನ್ಮ ಸಿಕ್ಕಿದೆ. ಆದರೂ ಆ ಬಾಲಕನಿಗೆ ನೋವು ಕಾಡುತ್ತಿದೆ.
ಶಿರಸಿಯ ಬನವಾಸಿ ಬಳಿಯ ನರೂರಿನ ರಘುನಂದನ ದತ್ತು ಭಟ್ಟ ಅವರು ತಮ್ಮ ತೋಟದ ಕೆಲಸಕ್ಕೆ ಅದೇ ಊರಿನ ನಾಗರಾಜ ಮಂಜಯ್ಯ ಚನ್ನಪ್ಪ ಅವರನ್ನು ನೇಮಿಸಿಕೊಂಡಿದ್ದರು. ನಾಗರಾಜ ಚನ್ನಯ್ಯ ಅವರು ಭಟ್ಟರ ತೋಟ ಸುತ್ತಾಡಿ ಅಲ್ಲಿ ಬರುವ ಮಂಗನನ್ನು ಓಡಿಸುವ ಕೆಲಸ ಮಾಡುತ್ತಿದ್ದರು. ಬರಿಗೈಯಲ್ಲಿ ಹೋದರೆ ಮಂಗ ಓಡುವುದಿಲ್ಲ ಎಂದು ನಾಗರಾಜ ಚನ್ನಯ್ಯ ಅವರು ಏರಗನ್ ಹಿಡಿದು ಕಾಡು ಸುತ್ತುತ್ತಿದ್ದರು.
ಅಕ್ಟೊಬರ್ 9ರ ಸಂಜೆ ನಾಗರಾಜ ಚನ್ನಯ್ಯ ಅವರು ಏರಗನ್ ಒಳಗೆ ಗುಂಡು ತುಂಬಿ ತೋಟಕ್ಕೆ ಹೋಗಿದ್ದರು. ಈ ವೇಳೆ ನರೂರ ಭಟ್ಟರಕೇರಿಯಲ್ಲಿ ಬದುಕು ಕಟ್ಟಿಕೊಂಡ ಅಣ್ಣಪ್ಪ ನಾಯ್ಕ ಅವರ ಮಕ್ಕಳು ಅಲ್ಲಿನ ಸಾತಕೇರೆ ಏರಿ ಮೇಲೆ ಆಡುತ್ತಿದ್ದರು. ಅಣ್ಣಪ್ಪ ನಾಯ್ಕ ಅವರ ಮಕ್ಕಳಾದ ಕೌಶಿಕ್ ನಾಯ್ಕ, ಕಿಶನ್ ನಾಯ್ಕ ಅವರು ತಮ್ಮ ಗೆಳೆಯ ಆದಿ, ದಿಶಾಂತ ಅವರ ಜೊತೆ ಆಟದಲ್ಲಿ ಮಗ್ನರಾಗಿದ್ದರು. ಈ ವೇಳೆ ತೋಟದಿಂದ ಬೆಟ್ಟದ ಕಡೆ ನಾಗರಾಜ ಚನ್ನಯ್ಯ ಅವರು ಮಂಗನ ಗುಂಪು ಓಡಿಸಿಕೊಂಡು ಬಂದರು. `ಹೂ ಹೋ’ ಎಂದು ಬೊಬ್ಬೆ ಹಾಕುತ್ತ ಬಂದ ನಾಗರಾಜ ಚೆನ್ನಯ್ಯ ಅವರು ಮಂಗಗಳಿಗೆ ಏರಗನ್ ತೋರಿಸಿದರು. ಆ ಮಂಗಗಳು ಸಾತಕೇರೆ ಏರಿ ಹತ್ತಿದ್ದು, ಕೈಯಲ್ಲಿದ್ದ ಏರಗನ್ ಟ್ರಿಗರ್ ಅದುಮಿದರು.
ಆ ಗುಂಡು ನೇರವಾಗಿ ಕೌಶಿಕ್ ನಾಯ್ಕ ಅವರ ತೊಡೆಗೆ ತಾಗಿತು. ವ್ಯಾಪಕ ಪ್ರಮಾಣದಲ್ಲಿ ರಕ್ತ ಸುರಿದಿದ್ದು, ಇದನ್ನು ನೋಡಿದ ನಾಗರಾಜ ಚನ್ನಯ್ಯ ಅವರು ಅಲ್ಲಿಂದ ಓಡಿ ಪರಾರಿಯಾದರು. ಆ ಸಮಯದಲ್ಲಿ ಪೇಟೆಗೆ ಹೋಗಿದ್ದ ಅಣ್ಣಪ್ಪ ನಾಯ್ಕ ಅವರು ರಾತ್ರಿ ಮನೆಗೆ ಬಂದರು. ಆಗ, ಅಣ್ಣಪ್ಪ ನಾಯ್ಕ ಅವರ ಪತ್ನಿ ಆತಂಕದಲ್ಲಿದ್ದರು. ಕೌಶಿಕ್ ನಾಯ್ಕ ದೊಡ್ಡದಾಗಿ ಅಳುತ್ತಿದ್ದರು. `ಏನಾಯಿತು?’ ಎಂದು ಪ್ರಶ್ನಿಸಿದಾಗ ಕೌಶಿಕ್ ನಾಯ್ಕ ಕುಂಡೆ ಕಾಣಿಸಿದರು. ಅಲ್ಲಿ ಗುಂಡುಗಳಿರುವುದನ್ನು ಅಣ್ಣಪ್ಪ ನಾಯ್ಕ ಅವರು ನೋಡಿದರು. ಗಂಭೀರ ಪ್ರಮಾಣದಲ್ಲಿ ಗಾಯವಾಗಿರುವುದನ್ನು ಗಮನಿಸಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು.
ಅದಾದ ನಂತರ ನಾಗರಾಜ ಚೆನ್ನಯ್ಯ ಅವರನ್ನು ವಿಚಾರಿಸಲು ಹೋದರು. `ಮಂಗ ಹೆದರಿಸಲು ಹಾರಿಸಿದ ಗುಂಡು ಆಕಸ್ಮಿಕವಾಗಿ ಟ್ರಿಗರ್ ಒತ್ತಿ ಬಾಲಕಿಗೆ ತಾಗಿತು. ಹೀಗಾಗಿ ಹೆದರಿ ಮನೆಗೆ ಬಂದಿದ್ದು, ನಿಮಗೆ ಹೇಳೋಣ ಅನ್ನುವಷ್ಟರಲ್ಲಿ ನೀವೇ ಮನೆಗೆ ಬಂದುಬಿಟ್ಟಿರಿ’ ಎಂದು ನಾಗರಾಜ ಚನ್ನಯ್ಯ ಅವರು ಸಬೂಬು ಹೇಳಿದರು. ಅಕ್ಟೊಬರ್ 11ರವರೆಗೆ ಮಗನಿಗೆ ಚಿಕಿತ್ಸೆ ನೀಡಿದ ಅಣ್ಣಪ್ಪ ನಾಯ್ಕ ಅವರು ಮಗ ಚೇತರಿಸಿಕೊಂಡ ಕಾರಣ ಮನೆಗೆ ಕರೆತಂದರು. ಅದಾದ ನಂತರ ಅಕ್ಟೊಬರ್ 12ರಂದು ಬನವಾಸಿ ಪೊಲೀಸ್ ಠಾಣೆಗೆ ತೆರಳಿ ಗುಂಡಿನ ಕಥೆ ವಿವರಿಸಿದರು. ಪೊಲೀಸರು ನಾಗರಾಜ ಚೆನ್ನಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿದರು.