ಅಂಕೋಲಾದ ಸಮೃದ್ಧ ಮಣ್ಣಿನಲ್ಲಿ ಹುಟ್ಟಿದ ತೆಂಗಿನ ಮರವೊಂದರಲ್ಲಿ ಈ ಬಾರಿ 5 ಸಾವಿರಕ್ಕೂ ಅಧಿಕ ಕಾಯಿ ಬಿಟ್ಟಿದೆ. ಈ ಮರ ನೋಡಿದ ಜನ ಅಚ್ಚರಿಗೆ ಒಳಗಾಗಿದ್ದು, ತಳಿ ಸಂಶೋಧನೆ-ಅಭಿವೃದ್ಧಿಗಾಗಿ ಸಸ್ಯ ತಜ್ಞರು ಆಸಕ್ತಿವಹಿಸಿದ್ದಾರೆ.
ಬೊಬ್ರುವಾಡ ಬಳಿಯ ಬೇಳಾಬಂದರಿನಲ್ಲಿನ ಅನಿಲ ನಾಯ್ಕ ಅವರ ಒಡೆತನದಲ್ಲಿ ಈ ಕಲ್ಪವೃಕ್ಷವಿದೆ. 27 ವರ್ಷಗಳ ಹಿಂದೆ ಅನಿಲ ನಾಯ್ಕ ಅವರ ತಂದೆ ರಾಮಾ ನಾಯ್ಕ ಅವರು ನೆಟ್ಟ ಗಿಡ ಇದೀಗ ದೊಡ್ಡದಾಗಿದ್ದು, ಬರಪೂರ ಫಸಲು ನೀಡುತ್ತಿದೆ. ಗಿಡ ನೆಟ್ಟ ಐದು ವರ್ಷಕ್ಕೆ ಫಸಲು ಶುರುವಾಗಿದ್ದು, ಮೊದಲ ಬಾರಿ 60 ತೆಂಗಿನ ಕಾಯಿ ಕಾಣಿಸಿಕೊಂಡಿತ್ತು. ಅದಾದ ನಂತರ ವರ್ಷದಿಂದ ವರ್ಷಕ್ಕೆ ಫಸಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಈ ವರ್ಷ 5 ಸಾವಿರಕ್ಕೂ ಅಧಿಕ ತೆಂಗಿನ ಕಾಯಿಗಳು ಮೂಡಿ ಬಂದಿದೆ.
ಈ ತೆಂಗಿನ ಮರಕ್ಕೆ ಮೊದಲ ಕೆಲ ವರ್ಷ ನೀರು ಎರೆದಿದ್ದು ಬಿಟ್ಟರೆ ಬೇರೆ ಯಾವುದೇ ಆರೈಕೆ ಮಾಡಿಲ್ಲ. ಈವರೆಗೂ ಯಾವುದೇ ಸಾವಯವ ಅಥವಾ ಗೊಬ್ಬರ ನೀಡಿಲ್ಲ. ಪೌಷ್ಠಕಾಂಶಗಳನ್ನು ನೀಡದಿದ್ದರೂ ಸಹ ಪುಟ್ಟ ಗಿಡ ಇದೀಗ ಹೆಮ್ಮರವಾಗಿ ಬೆಳೆದಿದೆ. ಈ ಅಪರೂಪದ ತೆಂಗಿನ ಮರದಲ್ಲಿ ದೊಡ್ಡ ಪ್ರಮಾಣದ 12 ಗೊಂಚಲುಗಳಿವೆ. ಪ್ರತಿಯೊಂದು ಗೊಂಚಲಲ್ಲಿ 600ಕ್ಕೂ ಹೆಚ್ಚು ಕಾಯಿಗಳು ತುಂಬಿಕೊoಡಿದೆ. ಕಾಯಿಯ ಗಾತ್ರ ಚಿಕ್ಕದಾಗಿದ್ದರೂ ಏಳನೀರು ಅತ್ಯಂತ ರುಚಿಯಾಗಿದೆ. ಈ ಮರದ ತೆಂಗಿನ ಕಾಯಿ ಬಳಸಿ ಮಾಡಿದ ಅಡುಗೆ ಸಹ ಅತ್ಯಂತ ಸ್ವಾದದಿಂದ ಕೂಡಿದೆ.
ಡಿಸೆಂಬರ್-ಜನವರಿ ಅವಧಿಯಲ್ಲಿ ಈ ಮರದ ಕಾಯಿಗಳ ಕೊಯ್ಲು ನಡೆಯುತ್ತದೆ. ಅಯ್ಯಪ್ಪ ವೃತದಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಈ ಕಾಯಿ ಖರೀದಿಸಿ ಇರುಮುಡಿ ಕಟ್ಟಲು ಬಳಸುತ್ತಾರೆ. 10 ಮರ ಕೊಡುವ ಆದಾಯವನ್ನು ಇದು ಒಂದೇ ಮರ ಮಾಲಕರಿಗೆ ನೀಡುತ್ತಿದೆ. ಈ ತೆಂಗಿನ ಮರದ ಬಗ್ಗೆ ಜನದನಿ ಸಸ್ಯ ಸಂಶೋಧನಾ ಕೇಂದ್ರದವರು ಅಧ್ಯಯನಕ್ಕೆ ಮುಂದಾಗಿದ್ದಾರೆ. ಜೊತೆಗೆ ಅದರ ತಳಿ ಅಭಿವೃದ್ಧಿಗೂ ಆಸಕ್ತಿವಹಿಸಿದ್ದಾರೆ. ಈ ತಳಿಗೆ `ಎ ಆರ್ ಗಂಜ್ನಿ ತೆಂಗು’ ಎಂದು ನಾಮಕರಣ ಮಾಡಿದ್ದು, ವಿಶಿಷ್ಠ ತಳಿಯ ತೆಂಗಿನ ಬಗ್ಗೆ ಸಂಶೋಧನೆ ನಡೆಯುತ್ತಿದೆ.