ಯಲ್ಲಾಪುರದ ಉಮ್ಮಚ್ಗಿಯಲ್ಲಿ ವಾಸವಾಗಿರುವ ಶಿಕ್ಷಕ ನಾಗಭೂಷಣ ಹೆಗಡೆ ಅವರು ಅಡಿಕೆ ಕದ್ದ ಆರೋಪ ಎದುರಿಸುತ್ತಿದ್ದಾರೆ. ನಾಗಭೂಷಣ ಹೆಗಡೆ ಅವರಿಂದ ಜೀವ ಬೆದರಿಕೆಯಿರುವ ಬಗ್ಗೆ ಅವರ ಸಹೋದರರೇ ದೂರಿದ್ದಾರೆ!
ಯಲ್ಲಾಪುರದ ಕಾನಗೋಡಿನ ಬಾಳೆಹದ್ದದಲ್ಲಿ ವಾಸವಾಗಿರುವ ನಾರಾಯಣ ಗಣಪತಿ ಹೆಗಡೆ ಅವರು ಈ ಆರೋಪ ಮಾಡಿದ್ದಾರೆ. ಉಮ್ಮಚ್ಗಿಯಲ್ಲಿರುವ ನಾಗಭೂಷಣ ಗಣಪತಿ ಹೆಗಡೆ ಹಾಗೂ ಮಂಜುನಾಥ ಗಣಪತಿ ಹೆಗಡೆ ಸೇರಿ ತಮ್ಮ ತೋಟದಲ್ಲಿರುವ ಅಡಿಕೆ ಅಪಹರಿಸಿರುವ ಬಗ್ಗೆ ಅವರು ದೂರಿದ್ದಾರೆ. ಇದನ್ನು ಪ್ರಶ್ನಿಸಿದ ಕಾರಣ `ತಮ್ಮ ಪ್ರಕಾಶ ಹಾಗೂ ತಮ್ಮ ಮೇಲೆ ದಾಳಿ ನಡೆಸಿದ್ದು, ಜೀವ ತೆಗೆಯುವುದಾಗಿ ಹೆದರಿಸಿದ್ದಾರೆ’ ಎಂದವರು ಹೇಳಿದ್ದಾರೆ.
ನವೆಂಬರ್ 16ರಂದು ನಾಗಭೂಷಣ ಗಣಪತಿ ಹೆಗಡೆ ಹಾಗೂ ಮಂಜುನಾಥ ಗಣಪತಿ ಹೆಗಡೆ ಸೇರಿ ಬಾಳೆಹದ್ದ ಕಾನಗೋಡು ಗ್ರಾಮದ ಸರ್ವೇ ನಂ 56/1ಕ್ಕೆ ಪ್ರವೇಶಿಸಿದ್ದರು. ಆ ಭೂಮಿ ನಾರಾಯಣ ಗಣಪತಿ ಹೆಗಡೆ ಅವರ ಹೆಸರಿನಲ್ಲಿದ್ದರೂ ನಾಗಭೂಷಣ ಹೆಗಡೆ ಹಾಗೂ ಮಂಜುನಾಥ ಹೆಗಡೆ ಸೇರಿ ಅಲ್ಲಿದ್ದ ಅಡಿಕೆ ಫಸಲು ಕೊಯ್ದಿದ್ದರು. ಕೊನೆ ಕೊಯ್ಲಿನವರೆಗೂ ಸುಮ್ಮನಿದ್ದ ನಾರಾಯಣ ಹೆಗಡೆ ಅವರು ಅದನ್ನು ಸಾಗಿಸುವಾಗ ಅಡ್ಡಗಟ್ಟಿದರು. ಟಾಟಾ ಎಸ್ ವಾಹನಕ್ಕೆ ಅಡ್ಡನಿಂತ ನಾರಾಯಣ ಹೆಗಡೆ ಹಾಗೂ ಅವರ ತಮ್ಮ ಪ್ರಕಾಶ ಅವರು `ನಮ್ಮ ತೋಟದ ಫಸಲು ಕೊಯ್ದಿದ್ದು ಏಕೆ?’ ಎಂದು ಪ್ರಶ್ನಿಸಿದರು.
ಈ ವೇಳೆ ಅವರ ನಡುವೆ ಜಗಳ ಶುರುವಾಗಿದ್ದು, ನಾಗಭೂಷಣ ಹೆಗಡೆ ಹಾಗೂ ಮಂಜುನಾಥ ಹೆಗಡೆ ಸೇರಿ ನಾರಾಯಣ ಹೆಗಡೆ ಹಾಗೂ ಪ್ರಕಾಶ ಅವರ ಮೇಲೆ ಕೈ ಮಾಡಿದರು. ಈ ಬಗ್ಗೆ ನಾಗಭೂಷಣ ಹೆಗಡೆ ಅವರು ಊರಿನ ಹಿರಿಯರಿಗೆ ಹೇಳಿದ್ದು, ಅವರ ಸಲಹೆ ಮೇರೆಗೆ ಪೊಲೀಸ್ ದೂರು ನೀಡಿದರು. ನಾಗಭೂಷಣ ಹೆಗಡೆ ಹಾಗೂ ಮಂಜುನಾಥ ಹೆಗಡೆ ಅವರಿಂದ ಜೀವ ಬೆದರಿಕೆಯಿರುವ ಬಗ್ಗೆಯೂ ಅವರು ಪ್ರಕರಣ ದಾಖಲಿಸಿದರು.