ದೇಶದ ಗಡಿ ಕಾಯಲು ಹೋದ ಯೋಧ ಮನೋಜಕುಮಾರ ಅವರ ಮನೆಯಲ್ಲಿಯೇ ಗಡಿ ಜಗಳ ಶುರುವಾಗಿದೆ. ಅವರ ಭೂಮಿಗೆ ಅದೇ ಊರಿನ ಕೆಲವರ ಆಕ್ರಮಣ ನಡೆದಿದ್ದು, ಮನೋಜಕುಮಾರ ಅವರ ತಾಯಿ ಕಂಗಾಲಾಗಿದ್ದಾರೆ.
ಸಿದ್ದಾಪುರದ ಹಾರ್ಸಿಕಟ್ಟಾದ ಮನೋಜಕುಮಾರ ಅವರು ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 22 ವರ್ಷಗಳಿಂದ ಅವರು ದೇಶ ಸೇವೆಯಲ್ಲಿದ್ದಾರೆ. ಶಿಸ್ತು, ಸಂಯಮ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅವರ ಕುಟುಂಬಕ್ಕೆ ಇದೀಗ ಆತಂಕ ಶುರುವಾಗಿದೆ. ಮನೋಜಕುಮಾರ ಅವರ ತಾಯಿ ಲಕ್ಷ್ಮೀ ನಾಯ್ಕ ಅವರಿಗೆ 70 ವರ್ಷ ವಯಸ್ಸಾಗಿದ್ದು, ಆರು ಜನ ಕಿಡಿಗೇಡಿಗಳು ಆ ವೃದ್ಧೆಯನ್ನು ಕಾಡಿಸುತ್ತಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ಲಕ್ಷ್ಮೀ ನಾಯ್ಕ ಅವರು ಆಸ್ಪತ್ರೆ ಸೇರಿದ್ದಾರೆ.
ಹಾರ್ಸಿಕಟ್ಟಾದ ಸಂತೋಷ ಕರಿಯಾ ನಾಯ್ಕ, ಸಂಜಯ ಕರಿಯಾ ನಾಯ, ಕರಿಯಾ ನಾರಾಯಣ ನಾಯ್ಕ, ಶ್ರೀಕಾಂತ ಬಳ್ಳಾರಿ ಹಾಗೂ ಮತ್ತೊಬ್ಬ ಅಪರಿಚಿತರಿಂದ ಈ ಯೋಧರ ಕುಟುಂಬಕ್ಕೆ ಸಮಸ್ಯೆಯಾಗಿದೆ. ಅನಾಧಿಕಾಲದಿಂದಲೂ ಲಕ್ಷ್ಮೀ ನಾಯ್ಕ ಅವರು ಅತಿಕ್ರಮಿಸಿಕೊಂಡು ಬಂದಿದ್ದ ಭೂಮಿಗೆ ನವೆಂಬರ್ 25ರಂದು ಆ ಆರು ಜನ ನುಗ್ಗಿದ್ದಾರೆ. ಅಲ್ಲಿದ್ದ ಬೇಲಿ ತೆಗೆದು ರಂಪಾಟ ಮಾಡಿದ್ದಾರೆ. ಪ್ರಶ್ನಿಸಿದ ಕಾರಣ ಯೋಧನ ತಾಯಿ ಲಕ್ಷ್ಮೀ ನಾಯ್ಕ ಅವರಿಗೆ ಕೆಟ್ಟದಾಗಿ ಬೈದಿದ್ದಾರೆ. ಲಕ್ಷ್ಮೀ ನಾಯ್ಕ ಅವರ ಬಟ್ಟೆಯನ್ನು ಹರಿದು ಅವಮಾನ ಮಾಡಿದ್ದಾರೆ. ಜೊತೆಗೆ ಸಂತೋಷ ನಾಯ್ಕ ಅವರು ಲಕ್ಷ್ಮೀ ನಾಯ್ಕ ಅವರನ್ನು ಗಟಾರಕ್ಕೆ ದೂಡಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.
ಈ ವೇಳೆ ಲಕ್ಷ್ಮೀ ನಾಯ್ಕ ಅವರು ಪ್ರಾಣ ಉಳಿಸಿಕೊಳ್ಳಲು ಮನೆ ಅಂಗಳಕ್ಕೆ ಹೋಗಿದ್ದು, ಅಲ್ಲಿಯೂ ಬಂದ ಡಕಾಯಿತರು ಕೂದಲು ಹಿಡಿದು ಕಾಲಿನಿಂದ ಒದ್ದಿದ್ದಾರೆ. ಲಕ್ಷ್ಮೀ ನಾಯ್ಕ ಅವರ ಸೊಸೆ, ಮೊಮ್ಮಗನಿಗೂ ಬೆದರಿಕೆ ಒಡ್ಡಿದ್ದಾರೆ. ಆಸ್ಪತ್ರೆ ಸೇರಿದ ಲಕ್ಷ್ಮೀ ನಾಯ್ಕ ಅವರು ಈ ಎಲ್ಲಾ ವಿಷಯದ ಬಗ್ಗೆ ಪೊಲೀಸರಿಗೆ ತಿಳಿಸಿ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕರಿಯಾ ನಾಯ್ಕ ಅವರ ಪುತ್ರ ಸಂತೋಷ ನಾಯ್ಕ ಅದಾದ ನಂತರ ಯೋಧನ ಕುಟುಂಬದ ವಿರುದ್ಧ ಪ್ರತಿ ದೂರು ನೀಡಿದ್ದಾರೆ. `ದಾರಿಯನ್ನು ಬಂದ್ ಮಾಡಿದ್ದರಿಂದ ಅದನ್ನು ತಾನು ತೆರವು ಮಾಡಿದ್ದೇನೆ. ಬೇಲಿ ತೆರವು ಮಾಡಲು ಹೋದಾಗ ಅಶೋಕ ನಾಯ್ಕ, ನಾರಾಯಣ ನಾಯ್ಕ ಜೊತೆ ಲಕ್ಷ್ಮೀ ನಾಯ್ಕ ಅವರು ಸೇರಿ ತಮ್ಮ ತಂದೆ ಕರಿಯಾ ನಾಯ್ಕ ಅವರ ಮೇಲೆ ಹಲ್ಲೆ ಪ್ರಯತ್ನ ಮಾಡಿದ್ದಾರೆ’ ಎಂದು ಸಂತೋಷ ನಾಯ್ಕ ಅವರು ದೂರಿದ್ದಾರೆ.