ಕುಮಟಾ ಬರ್ಗಿಯ ಗೋಪಾಲ ನಾಯ್ಕ ಅವರು ತಮ್ಮ ಅಂಗಡಿಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದು, ಅಪ್ಪ ಮಾಡಿದ ತಪ್ಪಿಗೆ ಅವರ ಮಗ ಸಚಿನ್ ನಾಯ್ಕ ಶಿಕ್ಷೆ ಅನುಭವಿಸುವ ಹಾಗಾಗಿದೆ!
ಕುಮಟಾದ ಬರ್ಗಿಯಲ್ಲಿ ಗೋಪಾಲ ನಾಯ್ಕ ಅವರು ಮೊದಲಿನಿಂದಲು ಮಳಿಗೆಯೊಂದನ್ನು ಹೊಂದಿದ್ದಾರೆ. ಅಲ್ಲಿ ವಿವಿಧ ಬಗೆಯ ತರಕಾರಿ, ಕಿರಾಣಿ ಹಾಗೂ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದರು. ಇದನ್ನು ಖರೀದಿಸಲು ಅವರಿಗೆ ಅವರದ್ದೇ ಆದ ಗಿರಾಕಿಗಳಿದ್ದು, `ಸರಾಯಿ ಮಾರಾಟ ಮಾಡಬೇಡಿ’ ಎಂದು ಹೇಳಿದರೂ ಗೋಪಾಲ ನಾಯ್ಕ ಅವರು ಅದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.
ಅತ್ಯಂತ ದುಬಾರಿ ಬೆಲೆಯ ಸರಾಯಿಗಳನ್ನು ಸಹ ಗೋಪಾಲ ನಾಯ್ಕ ಅವರು ತಮ್ಮ ಮಳಿಗೆಯಲ್ಲಿ ದಾಸ್ತಾನು ಮಾಡುತ್ತಿದ್ದರು. ಮಾರುಕಟ್ಟೆ ದರಕ್ಕಿಂತಲೂ 10ರೂ ಕಡಿಮೆ ಬೆಲೆಯಲ್ಲಿಯೂ ಅವರು ಮಾರುತ್ತಿದ್ದು, ಅದರ ರಹಸ್ಯ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೆ, ಸರಾಯಿ ಮಾರಾಟಕ್ಕೆ ಯಾವುದೇ ಅನುಮತಿ ಗೋಪಾಲ ನಾಯ್ಕ ಅವರ ಬಳಿಯಿರಲಿಲ್ಲ. ಸರ್ಕಾರದ ನಿಯಮಗಳನ್ನು ಅವರು ಪಾಲನೆ ಮಾಡುತ್ತಿರಲಿಲ್ಲ.
ತಮ್ಮ ಬಳಿಯಿರುವ ಸರಾಯಿ ಬಾಟಲಿಗಳನ್ನು ಗೋಪಾಲ ನಾಯ್ಕ ಅವರು ಬರ್ಗಿ ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಪಾಳು ಬಿದ್ದ ಮನೆಯಲ್ಲಿ ದಾಸ್ತಾನು ಮಾಡುತ್ತಿದ್ದರು. ಅಲ್ಲಿಯೇ ಮಾರಾಟ ವ್ಯವಸ್ಥೆಯನ್ನು ಅವರು ಹೊಂದಿದ್ದರು. ಆ ಮನೆಗೆ ಆಗಮಿಸಿದವರಿಗೆ ಅತಿಥಿ ಸತ್ಕಾರ ನಡೆಸಿ ಸರಾಯಿ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದರು. ಹೀಗಿರುವಾಗ ನವೆಂಬರ್ 2ರ ರಾತ್ರಿ ಗೋಕರ್ಣ ಪಿಎಸ್‌ಐ ಖಾದರ್ ಭಾಷಾ ಅವರು ಆ ಮನೆ ಪ್ರವೇಶಿಸಿದರು.
ಗಾಜಿನ ಬಾಟಲಿಯಲ್ಲಿ ತುಂಬಿದ್ದ ರಾಯಲ್ ಚಾಲೆಂಜ್, ಯುಬಿ ಎಕ್ಸಪೋರ್ಟ ಸ್ಟಾçಂಗ್ ಮೊದಲಾದ ಬಾಟಲಿಗಳನ್ನು ಅವರು ನೋಡಿದರು. ಈ ವೇಳೆ ಗೋಪಾಲ ನಾಯ್ಕ ಅವರು ಮೂತ್ರ ವಿಸರ್ಜನೆಗೆ ಹೊರಗೆ ಹೋಗಿದ್ದು, ಅವರ ಮಗ ಸಚಿನ್ ನಾಯ್ಕ ಪೊಲೀಸರ ಬಳಿ ಸಿಕ್ಕಿಬಿದ್ದರು. ಪೊಲೀಸರು ಸಚಿನ್ ನಾಯ್ಕ ಅವರನ್ನು ವಿಚಾರಣೆಗೆ ಒಳಪಡಿಸಿ, ಅಕ್ರಮ ಸರಾಯಿ ಮಾರಾಟದ ವೇಳೆ ಸಿಕ್ಕಿಬಿದ್ದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿದರು.