ಪುರುಷರ ಮೇಲೆ ನಡೆಯುವ ದೌರ್ಜನ್ಯ ತಡೆಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ ರಚನೆಯಾಗಿದ್ದು, ಮಹಿಳೆಯೊಬ್ಬರು ಇದಕ್ಕೆ ಅಧ್ಯಕ್ಷರಾಗಿದ್ದಾರೆ!
`ಮಹಿಳೆಯರ ರಕ್ಷಣೆಗಾಗಿ ಹಾಗೂ ಅವರಿಗೆ ನ್ಯಾಯ ಒದಗಿಸುವುದಕ್ಕಾಗಿ ಅನೇಕ ಕಾನೂನುಗಳಿವೆ. ಆದರೆ, ಆ ಕಾನೂನು ದುರುಪಯೋಗ ನಡೆಯುತ್ತಿದ್ದು, ದಬ್ಬಾಳಿಕೆಗೆ ಒಳಗಾದ ಪುರುಷರಿಗೆ ನ್ಯಾಯ ಒದಗಿಸಲು ನಾವು ಶ್ರಮಿಸುತ್ತೇವೆ’ ಎಂದು ಆ ಸಮಿತಿ ಅಧ್ಯಕ್ಷೆ ರಜನಿರಾಜ್ ಅವರು ಘೋಷಿಸಿದ್ದಾರೆ. ಶಿರಸಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಪುರುಷರಿಗೆ ಸಮಾನರಾಗಿ ಮಹಿಳೆಯರು ದುಡಿಯುತ್ತಿದ್ದು, ಅದೇ ಅಹಂಕಾರದಲ್ಲಿ ಗಂಡನ ಮೇಲೆ ಅನಗತ್ಯ ಆರೋಪ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪತಿಗೆ ಕಿರುಕುಳ ನೀಡುವ ಪ್ರಕರಣ ಗಮನಕ್ಕೆ ಬಂದಿದ್ದು, ಗಂಡನ ಮೇಲೆ ಹಿಡಿತ ಸಾಧಿಸಲು ಕಾನೂನು ದುರುಪಯೋಗ ನಡೆದಿದೆ’ ಎಂದು ಹೇಳಿದ್ದಾರೆ. `ಮಹಿಳೆಯರಿಂದ ಹಿಂಸೆ ಅನುಭವಿಸುವ ಪುರುಷರ ಬದುಕು ಬೀದಿಗೆ ಬರಬಾರದು ಎಂಬ ನಿಟ್ಟಿನಲ್ಲಿ ನಾವು ಹೋರಾಟ ಶುರು ಮಾಡಿದ್ದೇವೆ’ ಎಂದವರು ವಿವರಿಸಿದ್ದಾರೆ.
`ಮಹಿಳೆಯರ ದಬ್ಬಾಳಿಕೆಯಿಂದ ಪುರುಷರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಅಂಥ ಪುರುಷರ ಪರವಾಗಿ ನಮ್ಮ ಸಂಘಟನೆ ನಿಂತು ಅವರಿಗೆ ನ್ಯಾಯ ಕೊಡಿಸಲಿದೆ. ಮಾಜಿ ಸಚಿವ ಎಚ್ ವಿಶ್ವನಾಥ ಅವರು ನಮ್ಮ ಸಮಿತಿಯ ಗೌರವಾಧ್ಯಕ್ಷರಾಗಿದ್ದು, ಈವರೆಗೆ 75ಕ್ಕೂ ಅಧಿಕ ದೂರುಗಳು ಬಂದಿವೆ’ ಎಂದವರು ಮಾಹಿತಿ ನೀಡಿದ್ದಾರೆ. `ದೂರು ಬಂದ ನಂತರ ಪತಿ-ಪತ್ನಿಯರನ್ನು ಕರೆಯಿಸಿ ಮಾತನಾಡಿಸುತ್ತೇವೆ. ಪರಸ್ಪರ ತಿಳುವಳಕೆ ಮೂಡಿಸುತ್ತೇವೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುತ್ತೇವೆ’ ಎಂದರು. `ಮಂಡ್ಯ ಹಾಗೂ ಬೆಂಗಳೂರಿನಲ್ಲಿರುವ ಸಮಿತಿಯನ್ನು ರಾಜ್ಯದ ಎಲ್ಲಡೆ ವಿಸ್ತರಿಸಿ, ಇದಕ್ಕಾಗಿ ವಿಶೇಷ ಹೆಲ್ಪಲೈನ್ ಸಹ ಶುರು ಮಾಡುತ್ತೇವೆ’ ಎಂದು ಘೋಷಿಸಿದರು.